ಚಂದ್ರಗ್ರಹಣ ಹಿನ್ನೆಲೆ ಮಂಡ್ಯ ಜಿಲ್ಲೆಯ ಹಲವು ದೇಗುಲಗಳು ಬಂದ್..!

| Published : Sep 08 2025, 01:00 AM IST

ಸಾರಾಂಶ

ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಮಧ್ಯಾಹ್ನದವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿ ಬಂದ್ ಮಾಡಲಾಯಿತು. ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವಿ ದರ್ಶನಕ್ಕೆ ಭಕ್ತರ ದಂಡು ಆಗಮಿಸುತ್ತಿತ್ತು. ಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಮಧ್ಯಾಹ್ನದವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿ ಬಂದ್ ಮಾಡಲಾಯಿತು.

ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವಿ ದರ್ಶನಕ್ಕೆ ಭಕ್ತರ ದಂಡು ಆಗಮಿಸುತ್ತಿತ್ತು. ಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಭಕ್ತರು ಆಗಮಿಸಿ ನಿಮಿಷಾಂಭ ದೇವಿ ದರ್ಶನ ಪಡೆದರು. ಮಧ್ಯಾಹ್ನದ ನಂತರ ದೇವಾಲಯದ ಬಾಗಿಲು ಬಂದ್ ಮಾಡಲಾಯಿತು. ಗ್ರಹಣ ಕಾಲದಲ್ಲಿ ನಿಮಿಷಾಂಭ ದೇವಿಗೆ ಮಂತ್ರಪಠಣದ ಮೂಲಕ ಜಲಾಭಿಶೇಕ ಮಾಡಲಾಯಿತು.

ಅಲ್ಲದೇ, ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿ, ನಂತರ ದೇವಸ್ಥಾನ ಬಾಗಿಲು ಬಂದ್ ಮಾಡಲಾಯಿತು.

ಗ್ರಹಣದ ನಂತರ ಸೋಮವಾರ ಬೆಳಗ್ಗೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮದೊಂದಿಗೆ ಶುದ್ಧಿ ಕಾರ್ಯ ನಡೆದು ಬೆಳಗ್ಗೆ 7 ಗಂಟೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ದೇಗುಲದ ಅರ್ಚಕರು ತಿಳಿಸಿದರು.

ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲೂ ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 4 ಗಂಟೆ ನಂತರ ದೇವಸ್ಥಾನ ಬಂದ್ ಮಾಡಲಾಯಿತು. ಗ್ರಹಣದ ವೇಳೆ ದೇವಸ್ಥಾನ ಒಳಭಾಗದಲ್ಲಿ ಪೂಜೆ ನಡೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಸೋಮವಾರ ಬೆಳಗ್ಗೆ ದೇವಸ್ಥಾನದಲ್ಲಿ ಶುದ್ಧೀಕರಣ, ವಿಶೇಷ ಪೂಜೆ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಇದೇ ರೀತಿ ಜಿಲ್ಲೆಯ ಹಲವು ದೇವಾಲಯಗಳಲ್ಲಿಯೂ ಗ್ರಹಣದ ಮುಂಚೆಯೇ ಭಕ್ತರ ದರ್ಶನಕ್ಕೆ ಅವಕಾಶ ನೀಡಿ ನಂತರ ದೇಗುಲಗಳ ಬಾಗಿಲು ಬಂದ್ ಮಾಡಿರುವ ವರದಿಯಾಗಿದೆ. ಸೋಮವಾರ ಎಂದಿನಂತೆ ದೇವಾಲಯಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಸಿಗಲಿದೆ.ಗ್ರಹಣದ ಸಮಯದಲ್ಲೂ ಮಹಾಕಾಳಿ ದೇವಿಗೆ ಪೂಜೆ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಟಿಎಂ.ಹೊಸೂರು ಗೇಟ್ ಬಳಿ ಇರುವ ಮಹಾಕಾಳಿ ದೇವಾಲಯದಲ್ಲಿ ಚಂದ್ರಗ್ರಹಣ ಸಮಯದಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದುಮಹಾಕಾಳಿ ದೇವಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗಿದೆ.

ಮಹಾಕಾಳಿ ದೇವಾಲಯದಲ್ಲಿ ಯಾವುದೇ ಗ್ರಹಣವಿದ್ದರೂ ದೇವಿಗೆ ಪ್ರತಿ ನಿತ್ಯದ ಪೂಜೆಗಳು, ಹೋಮಗಳು ನಿಲ್ಲದಂತೆ ನೋಡಿಕೊಳ್ಳಲಾಗಿದೆ. ಗ್ರಹಣ ಕಾಲದಲ್ಲೂ ದೇವಾಲಯ ಬಂದ್ ಮಾಡದೆ ಎಲ್ಲಾ ಭಕ್ತರಿಗೆ ಮುಕ್ತ ಪ್ರವೇಶ ನೀಡಿ ದೇವಿಗೆ ಪೂಜೆ ಸಲ್ಲಿಸಿದರು.

ದೇವಾಲಯ ಸಂಸ್ಥಾಪಕ ಗುರುದೇವ್ ಮಾತನಾಡಿ, ಗ್ರಹಣಗಳು ಪ್ರಕೃತಿ ಸಹಜ ವಿಸ್ಮಯಗಳು. ಅವುಗಳಿಂದ ಯಾವುದೇ ದೋಷ ಇಲ್ಲ. ಗ್ರಹಣಗಳಿಗೆ ಜನರು ಹೆದರುವ ಅವಶ್ಯಕತೆ ಇಲ್ಲ. ಎಲ್ಲರೂ ಬಂದು ದೇವರ ದರ್ಶನ ಪಡೆದು ಮೌಢ್ಯತೆಯಿಂದ ಹೊರ ಬರುವಂತೆ ಕರೆ ನೀಡಿದರು.

ನಮ್ಮ ಪೂರ್ವಜರಿಂದಲೂ ನಮಗೆ ಗ್ರಹಣ ಕಾಲದಲ್ಲಿ ನಮಗೆ ಏನೂ ಆಗಿಲ್ಲ. ನಾವು ನಾಳೆಯೂ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ದೇವಾಲಯದ ಬಾಗಿಲು ತೆರೆದು ದೇವಿಗೆ ಪೂಜೆ ಸಲ್ಲಿಸುತ್ತೇವೆ. ಅಲ್ಲದೇ, ಗ್ರಹಣದ ದಿನ ದೇವಿಗೆ ವಿಶೇಷವಾಗಿ ಪ್ರತ್ಯಂಗೀರಾ ಹೋಮ ಹಾಗೂ ಪೂಜೆ ಇರಲಿದೆ. ಜನರು ಮೌಢ್ಯದಿಂದ ಹೊರಬಂದು ದೇವರ ದರ್ಶನ ಪಡೆಯಬಹುದು ಎಂದು ತಿಳಿಸಿದರು. ವಿವಿಧ ಗ್ರಾಮಗಳಿಂದ ದೇವಾಲಯದಲ್ಲಿ ಭಕ್ತರ ದಂಡು ಹರಿದು ಬಂದಿತ್ತು.