ನಿರಂತರ ಚಿತ್ತೆ ಮಳೆಗೆ ಹಲವು ಗ್ರಾಮಗಳ ಸಂಪರ್ಕಗಳೇ ಕಡಿತ

| Published : Oct 22 2024, 12:34 AM IST

ಸಾರಾಂಶ

ಒಂದು ರಾತ್ರಿ ಸುರಿದ ಚಿತ್ತೆ ಮಳೆಯು ಕುಣಿಗಲ್ ನಂತಹ ದೊಡ್ಡ ಕೆರೆಯನ್ನೇ ಈ ಹಿಂದೆ ಒಡೆದು ಹಾಕಿತ್ತು ಎಂದು ರೈತರು ಈ ಮಳೆಯ ಕುರಿತು ಬೆರಗಿನಿಂದ ಮಾತನಾಡುತ್ತಾರೆ.

ಕನ್ನಡಪ್ರಭ ವಾರ್ತೆ ಕುದೂರು

ರಾತ್ರಿಯಿಡೀ ಸುರಿದ ಮಳೆಗೆ ಕುದೂರು, ತಿಪ್ಪಸಂದ್ರ, ಮಾಗಡಿ ಸುತ್ತಮುತ್ತಲಿನ ಕೆರೆಗಳು ಕೋಡಿಯಾಗಿ ಸಂಪರ್ಕ ಸೇತುವೆ ಮೇಲೆ ನೀರು ಹರಿದು ಗ್ರಾಮಗಳ ಸಂಪರ್ಕಗಳೇ ಕಡಿದು ಹೋಗಿವೆ. ಒಂದು ರಾತ್ರಿ ಸುರಿದ ಚಿತ್ತೆ ಮಳೆಯು ಕುಣಿಗಲ್ ನಂತಹ ದೊಡ್ಡ ಕೆರೆಯನ್ನೇ ಈ ಹಿಂದೆ ಒಡೆದು ಹಾಕಿತ್ತು ಎಂದು ರೈತರು ಈ ಮಳೆಯ ಕುರಿತು ಬೆರಗಿನಿಂದ ಮಾತನಾಡುತ್ತಾರೆ. ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಸುರಿದ ಮಳೆಗೆ ಕಾಳಾರಿ, ಹಾಲಸಿಂಗನಪಾಳ್ಯ, ಬೆಳಗುಂಬ, ಕಲ್ಯಾ ಕರೆಗಳು ಭರ್ತಿಯಾಗಿ ಸಣ್ಣಪುಟ್ಟ ಕಟ್ಟೆಗಳು ತುಂಬಿ ತುಳುಕುತ್ತಿವೆ. ಮರೂರು ಮತ್ತು ಕಾಳಾರಿ ಸಂಪರ್ಕಿಸುವ ರಸ್ತೆಯ ಮೇಲೆ ಕಾಳಾರಿ ಕೆರೆ ಕೊಡಿ ನೀರು ಹರಿದ ಪರಿಣಾಮವಾಗಿ ಬಸ್ಸುಗಳಾದಿಯಾಗಿ ಯಾವುದೇ ವಾಹನಗಳು ಓಡಾಡಲಾಗದೆ ಬೇರೆ ಮಾರ್ಗ ಬಳಸಿಕೊಂಡು ಮಾಗಡಿ, ಕುದೂರಿಗೆ ತಲುಪುವಂತಾಯಿತು. ನೀರಿನ ಪ್ರಮಾಣ ಹೆಚ್ಚಾದ ಕಾರಣ ಹೊಲ- ತೋಟಗಳಿಗೂ ನುಗ್ಗಿ ರೈತರು ಹೈರಾಣಾಗುವಂತಾಯಿತು. ತೆಂಗಿನ ಮರಗಳು ಮತ್ತು ಅಡಿಕೆ ಮರಗಳು ನೀರಿನಲ್ಲಿ ತೇಲುತ್ತಾ ಬರುತ್ತಿದ್ದ ದೃಶ್ಯ ನೀರಿನ ಹರಿವಿನ ಶಕ್ತಿಯನ್ನು ತೋರಿಸುತ್ತಿತ್ತು. ಹೀಗೆ ಹರಿದ ನೀರು ತಿಪ್ಪಸಂದ್ರ ಕೆರೆ ಮಾರ್ಗವಾಗಿ ಕುಣಿಗಲ್ ಕೆರೆ ತಲುಪುತ್ತದೆ.