ಶರಣರು, ಸೂಫಿ ಸಂತರು, ದಾಸರು ಜನಿಸಿದ ಈ ನಾಡಿನಲ್ಲಿ ಇಂತಹ ಘೋರ ಕೃತ್ಯ ನಡೆದಿರುವುದು ಮನುಕುಲವೇ ತಲೆ ತಗ್ಗಿಸುವಂತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ರಾಜ್ಯದಲ್ಲಿ ದಲಿತರು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.
ಹುಬ್ಬಳ್ಳಿ:
ರಾಜ್ಯ ಸರ್ಕಾರದ ವೈಫಲ್ಯದಿಂದಾಗಿಯೇ ಇನಾಂ ವೀರಾಪುರದಲ್ಲಿ ಮಾನ್ಯಾ (ಮರ್ಯಾದಾ) ಹತ್ಯೆ ನಡೆದಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಹತ್ಯೆಗೊಳಗಾದ ಮಾನ್ಯಾಳ ಪತಿ ವಿವೇಕಾನಂದ ದೊಡ್ಡಮನಿ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ 7-8 ತಿಂಗಳಿನಿಂದ ಇನಾಂವೀರಾಪುರ ಗ್ರಾಮದಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದವು. ಆಗಲೇ ಜಿಲ್ಲಾಡಳಿತ ಎಚ್ಚೆತ್ತು ಗ್ರಾಮದಿಂದ ದೊಡ್ಡಮನಿ ಕುಟುಂಬ ಸ್ಥಳಾಂತರಿಸಿದ್ದರೆ ಈ ಕೃತ್ಯ ನಡೆಯುತ್ತಿರಲಿಲ್ಲ ಎಂದು ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು.ಶರಣರು, ಸೂಫಿ ಸಂತರು, ದಾಸರು ಜನಿಸಿದ ಈ ನಾಡಿನಲ್ಲಿ ಇಂತಹ ಘೋರ ಕೃತ್ಯ ನಡೆದಿರುವುದು ಮನುಕುಲವೇ ತಲೆ ತಗ್ಗಿಸುವಂತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ರಾಜ್ಯದಲ್ಲಿ ದಲಿತರು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಏನು ಮಾಡುತ್ತಿದೆ ಎಂಬುದು ತಿಳಿಯದಾಗಿದೆ ಎಂದರು.
ಘಟನೆ ನಡೆದ 24 ಗಂಟೆಯೊಳಗೆ ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ಕೃತ್ಯ ನಡೆದ ಬಳಿಕ ಬೆಂಗಳೂರಿನಲ್ಲಿ ನಾವು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ನಂತರ ಸಚಿವರು ಇನಾಂವೀರಾಪುರಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವ ನಾಟಕ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.5 ಕುಟುಂಬ ಸ್ಥಳಾಂತರಿಸಿ:
ಈ ಹತ್ಯೆಯಿಂದಾಗಿ ಗ್ರಾಮದಲ್ಲಿರುವ ಐದು ದಲಿತ ಕುಟುಂಬಗಳು ಭಯಭೀತರಾಗಿದ್ದು, ಈ ಕೂಡಲೇ ಜಿಲ್ಲಾಡಳಿತ ಈ ಕುಟುಂಬಗಳನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಬೇಕು. ವಿವೇಕಾನಂದ ದೊಡ್ಡಮನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.ವಿಪ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಗ್ರಾಮದಲ್ಲಿ ನಡೆದ ಕೃತ್ಯ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರು ಬದುಕಿದ ನಾಡಿನಲ್ಲಿ ಇಂತಹ ಘೋರ ಘಟನೆ ಎಂದೂ ನಡೆಯಬಾರದು. ರಾಜ್ಯ ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕ ಕಾಯ್ದೆ ತರಲು ಮುಂದಾಗಿರುವುದು ತೊಂದರೆಗೆ ಒಳಗಾಗಿರುವವರಿಗೆ ನ್ಯಾಯ ನೀಡಲು ಅಲ್ಲ. ಇದು ಕೇವಲ ಸರ್ಕಾರದ ಕಾಲಹರಣದ ಕೆಲಸ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹೇಂದ್ರ ಕೌತಾಳ, ವಸಂತ ನಾಡಜೋಶಿ, ಹನಮಂತ ಹರಿವಾಣ, ದಲಿತ ಸಂಘಟನೆಯ ಮುಖಂಡರಾದ ಶ್ರೀಧರ ಕಂದಗಲ್, ಸುರೇಶ ಖಾನಾಪುರ ಸೇರಿದಂತೆ ಹಲವರಿದ್ದರು.
ಪ್ರತ್ಯೇಕ ಕಾನೂನು ಅಗತ್ಯವಿಲ್ಲಮಾರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರತ್ಯೇಕ ಕಾನೂನು ಜಾರಿಗೆ ತರುವ ಅಗತ್ಯವಿಲ್ಲ. ಇದ್ದ ಕಾನೂನುಗಳನ್ನೇ ಬಲಪಡಿಸಲಿ ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.ಮರ್ಯಾದಾ ಹತ್ಯೆ ಸೇರಿದಂತೆ ದಲಿತರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಸಾಕಷ್ಟು ಕಾನೂನುಗಳಿವೆ. ಹೊಸ ಕಾಯ್ದೆ ಜಾರಿಗೆ ತಂದರೆ ನೂರರಲ್ಲಿ ಅದು ಸಹ ಒಂದಾಗಲಿದೆ. ಅದರಿಂದ ಯಾವುದೇ ಪ್ರಯೋಜನವಿಲ್ಲ. ಇದ್ದ ಕಾಯ್ದೆಯನ್ನೇ ಗಟ್ಟಿಪಡಿಸಲು ಏನು ಮಾಡಬಹುದು ಎಂದು ಸರ್ಕಾರ ಚಿಂತನೆ ನಡೆಸಲಿ ಎಂದರು.