ಸಾರಾಂಶ
ಕೊಪ್ಪಳ : ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಪ್ರಕರಣದಲ್ಲಿ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ₹5 ಸಾವಿರ ದಂಡ ಮತ್ತು ಮೂವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ₹2 ಸಾವಿರ ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ. ಚಂದ್ರಶೇಖರ ಈ ಮಹತ್ವದ ತೀರ್ಪು ನೀಡಿದ್ದಾರೆ. ಅಸ್ಪೃಶ್ಯತೆ ಪ್ರಕರಣವೊಂದರಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ಜೀವಾವಧಿ ಶಿಕ್ಷೆಯಾಗಿರುವುದು ದೇಶದಲ್ಲಿಯೇ ಇದೇ ಮೊದಲು ಎಂದು ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಆರೋಪ ಸಾಬೀತಾಗಿರುವ ಹಿನ್ನೆಲೆ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟ ಮಾಡಿ, ಆರೋಪಿಗಳನ್ನು ಜೈಲಿಗೆ ಕಳುಹಿಸಲಾಯಿತು.
ಏನಿದು ಪ್ರಕರಣ?
2014ರಲ್ಲಿ ಮರಕುಂಬಿ ಗ್ರಾಮದಲ್ಲಿ ಜಾತಿ ಸಂಘರ್ಷವಾಗಿತ್ತು. ಗ್ರಾಮದ ದಲಿತರಿಗೆ ಕ್ಷೌರದಂಗಡಿಯಲ್ಲಿ ಮತ್ತು ಹೋಟೆಲ್‌ನಲ್ಲಿ ಪ್ರವೇಶ ಇರಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದು ವಿವಾದಕ್ಕೆ ಕಾರಣವಾಗಿ ಗಲಾಟೆಯಾಗಿತ್ತು.
ಇದಾದ ಮೇಲೆ ಗ್ರಾಮದ ಯುವಕ ಮಂಜುನಾಥ ಗಂಗಾವತಿಗೆ ಸಿನೆಮಾ ನೋಡಲು ಹೋಗಿದ್ದು, ಟಿಕೆಟ್ ಪಡೆಯುವ ವೇಳೆ ಆತನ ಮೇಲೆ ಹಲ್ಲೆಯಾಗಿತ್ತು. ಮರಳಿ ಗ್ರಾಮಕ್ಕೆ ಆಗಮಿಸಿದ ಮಂಜುನಾಥ, ದಲಿತರು ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದರಿಂದ ಸರ್ವಣೀಯರೆಲ್ಲರೂ ಸೇರಿ ಅಂದು ಸಂಜೆ ಕೇರಿಗೆ ನುಗ್ಗಿ ದಾಂಧಲೆ ಮಾಡಿದ್ದರು. ಕೇರಿಯ ಗುಡಿಸಲಿಗೆ ಬೆಂಕಿ ಹಚ್ಚಿದ್ದರು. ದಲಿತಪರ ಹೋರಾಟಗಾರ ಗಂಗಾಧರ ಸ್ವಾಮಿ ಮನೆಗೆ ನುಗ್ಗಿ ಹೊಡೆದಿದ್ದರು.
ಗುಡಿಸಲಲ್ಲಿ ಯಾರು ಇಲ್ಲದೆ ಇರುವುದರಿಂದ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಆದರೆ, ಗಲಾಟೆಯಲ್ಲಿ ಕೇರಿಯಲ್ಲಿನ ಅನೇಕರು ಗಾಯಗೊಂಡು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು.
ಈ ಕುರಿತು ಭೀಮೇಶ್ ಆ. 29, 2014ರಂದು ಗಂಗಾವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದಲಿತ ಸಮಾಜದವರೊಂದಿಗೆ ಚರ್ಚೆ ಮಾಡಿ 98 ಆರೋಪಿಗಳು ಸೇರಿದಂತೆ ಇತರರು ಎಂದು ದೂರು ದಾಖಲು ಮಾಡಿದ್ದರು. ದೂರು ಸ್ವೀಕಾರ ಮಾಡಿ, ತನಿಖೆ ಮಾಡಿದ ಪೊಲೀಸರು ಪ್ರಾಥಮಿಕ ವರದಿ ಸಲ್ಲಿಸಿ, 117 ಜನರ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.
ಈ ಕುರಿತು ಸುದೀರ್ಘ 9 ವರ್ಷಗಳ ವಿಚಾರಣೆ ನಡೆದ ಬಳಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 101 ಜನರ ವಿರುದ್ಧ ಅ. 21ರಂದು ಆರೋಪ ಸಾಬೀತಾಗಿತ್ತು. ಈಗ ಶಿಕ್ಷೆಯ ಪ್ರಮಾಣ ಪ್ರಕಟ ಮಾಡಿದ್ದು, 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದ್ದಾರೆ. ಹಾಗೆಯೇ ಪರಿಶಿಷ್ಟ ಸಮುದಾಯದವರಾದ ಮೂವರಿಗೆ 5 ವರ್ಷ ಶಿಕ್ಷೆ ಮತ್ತು ₹2 ಸಾವಿರ ದಂಡ ವಿಧಿಸಿದ್ದಾರೆ. ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೋಜಕಿ ಅಪರ್ಣಾ ಬಂಡಿ ವಾದ ಮಂಡಿಸಿದ್ದಾರೆ.
ಮತ್ತೆ ಜೈಲಿಗೆ
ಶಿಕ್ಷೆಗೆ ಗುರಿಯಾಗಿರುವ ಅಷ್ಟೂ ಜನರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಯಿತು. ಶಿಕ್ಷೆ ಪ್ರಕಟವಾಗುವ ಹಿನ್ನೆಲೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಭಾರಿ ಬಂದೋಬಸ್ತ್ ನಡುವೆ ಕರೆತಂದು, ಶಿಕ್ಷೆ ಪ್ರಕಟವಾದ ನಂತರ ಮತ್ತೆ ಜೈಲಿಗೆ ಕಳುಹಿಸಲಾಯಿತು.
ಕಣ್ಣೀರಿಟ್ಟ ಕುಟುಂಬಸ್ಥರು
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ದೊಡ್ಡ ಹೈಡ್ರಾಮಾವೇ ನಡೆಯಿತು. ಗ್ರಾಮದ ಘಟನೆಯ ಕುರಿತು ಶಿಕ್ಷೆ ಪ್ರಕಟವಾಗುತ್ತದೆ ಎಂದು ಆರೋಪಿಗಳ ಸಂಬಂಧಿಕರು ದೊಡ್ಡ ಸಂಖ್ಯೆಯಲ್ಲಿಯೇ ಆಗಮಿಸಿದ್ದರು. ನ್ಯಾಯಾಲಯದ ಆವರಣದಲ್ಲಿ ಬಿಕ್ಕಿ ಬಿಕ್ಕಿ ಅಳುವ ದೃಶ್ಯ ಕಂಡು ಬಂದಿತು. ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿತು.
ಸ್ಮಶಾನ ಮೌನ
ದಲಿತ ಕೇರಿಗೆ ನುಗ್ಗಿ ಗುಡಿಸಲಿಗಳಿಗೆ ಬೆಂಕಿ ಹಚ್ಚಿದ ಮರುದಿನವೂ ಮರುಕುಂಬಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಆದರೆ, ಈಗ ಸರ್ವಣೀಯರಿಗೆ ಶಿಕ್ಷೆ ಪ್ರಕಟ ಮಾಡಿದ್ದರಿಂದ ಗ್ರಾಮದ ಬಹುತೇಕರು ನ್ಯಾಯಾಲಯಕ್ಕೆ ಬಂದಿದ್ದರಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.
)
;Resize=(128,128))
;Resize=(128,128))
;Resize=(128,128))
;Resize=(128,128))