ಯುದ್ಧದ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಸಹೋದರ ಸಾಂಭಾಜಿ ಮಹಾರಾಜ್ ಕನಕಗಿರಿಯಲ್ಲಿ ಹತನಾಗಿದ್ದಾನೆಎಂದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದಿದೆ
ಕನಕಗಿರಿ: ಛತ್ರಿಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರಕ್ಕೆ ಕಲ್ಪಿಸುವ ರಸ್ತೆಯಲ್ಲಿನ ಶಿವಾಜಿ ಸಹೋದರ ಸಾಂಭಾಜಿ ಸಮಾಧಿ ಎನ್ನಲಾದ ಸ್ಥಳಕ್ಕೆ ಕ್ಷತ್ರಿಯ ಸಮಾಜದವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಮಾಜದ ಹಿರಿಯ ಮುಖಂಡ ಬಾಜೀರಾವ್ ಮಾತನಾಡಿ, ಯುದ್ಧದ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಸಹೋದರ ಸಾಂಭಾಜಿ ಮಹಾರಾಜ್ ಕನಕಗಿರಿಯಲ್ಲಿ ಹತನಾಗಿದ್ದಾನೆಎಂದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದಿದೆ. ಛತ್ರಪತಿ ಶಿವಾಜಿಗೂ ಕನಕಗಿರಿಗೂ ಅವಿನಾಭಾವ ಸಂಬಂಧ ಇತ್ತು ಎನ್ನುವುದಕ್ಕೆ ಸಾಂಭಾಜಿ ಸಮಾಧಿ ಸಾಕ್ಷಿಯಾಗಿದೆ. ಅಲ್ಲದೇ ಇದೇ ಪ್ರದೇಶದಲ್ಲಿ ಯುದ್ಧದ ಸನ್ನಿವೇಶದ ಶಿಲಾಚಿತ್ರಗಳು ಹಾಗೂ ಕೋಟೆ ಒಳಗೊಂಡಿದೆ. ಈ ಹಿಂದಿನ ಸರ್ಕಾರದ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಮುಳೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ಈ ಸ್ಮಾರಕದ ಅಭಿವೃದ್ಧಿಗಾಗಿ ಅನುದಾನ ನೀಡುವ ಭರವಸೆ ನೀಡಿದ್ದರು. ಬದಲಾದ ರಾಜಕೀಯದಲ್ಲಿ ಸ್ಮಾರಕವು ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಭಾರತದ ಚರಿತ್ರೆಯಲ್ಲಿ ತಮ್ಮದೇ ಚಾರಿತ್ರ್ಯ ಹೊಂದಿದ ಸಾಂಭಾಜಿ ಮಹಾರಾಜರ ಸಮಾಧಿ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.ಹಿಂದೂ ಜಾಗರಣ ವೇದಿಕೆಯ ಮುಖಂಡ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಶಿವಾಜಿ ಸಹೋದರ ಸಾಂಭಾಜಿ ಸಮಾಧಿ ಅಭಿವೃದ್ಧಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸ್ಮಾರಕದ ಅಭಿವೃದ್ಧಿಗೆ ಮುಂದಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ. ಕೆಲವೇ ದಿನಗಳಲ್ಲಿ ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅವರನ್ನು ಕರೆ ತಂದು ಭೂಸ್ವಾಧಿನಪಡಿಸಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹನುಮೇಶ ಗಾಯಗ್ವಾಡ, ನಾಗಭೂಷಣ ದುಮ್ಮಾಳ್, ನಾಗರಾಜ ಮರಾಠಿ, ವಸಂತ ಮರಾಠಿ, ರವಿಕುಮಾರ ಪೈದೊಡ್ಡಿ, ಬಸವರಾಜ ಆರೇರ್, ಅಂಬಣ್ಣ ಹೂಗಾರ, ಹನುಮೇಶ ಮಿತ್ರ ಮಹಿಪತಿ, ಬಸವರಾಜ ಬಿ.ಕೆ, ಜೀವನ್ ಮರಾಠಿ, ಹನುಮಂತಪ್ಪ ರಾಟಿ, ತಿಪ್ಪಣ್ಣ ಆರೇರ್, ಹನುಮೇಶ ಡಿಶ್, ಕುಮಾರ ಮರಾಠಿ ಸೇರಿದಂತೆ ಇತರರಿದ್ದರು.