ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಂಗಮೇಶ್ವರ ಬಡಾವಣೆ, ಜವೇನಹಳ್ಳಿ ಕೆರೆ ಬಳಿಯ ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಲಿಯೋ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಹಾಸನಾಂಬ ಸಹಪ್ರಾಯೋಜಕತ್ವದಲ್ಲಿ ಭಾನುವಾರ ಆಯೋಜಿಸಲಾದ ೬ ಕಿ.ಮೀ ಮ್ಯಾರಥಾನ್ ಓಟದಲ್ಲಿ ನೂರಾರು ಮಂದಿ ಓಟಗಾರರು ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.ಸುಮಾರು ೧೫೦ಕ್ಕೂ ಹೆಚ್ಚು ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು, ಪುರುಷರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹಭರಿತವಾಗಿ ಓಟದಲ್ಲಿ ಪಾಲ್ಗೊಂಡರು. ಬೆಳಗಿನ ಚಳಿ, ಗಾಳಿಯಲ್ಲಿ ನಡೆದ ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಸ್ಪರ್ಧಿಗಳು ಕ್ರೀಡಾ ಮನೋಭಾವ ತೋರಿದರೆ, ಸ್ಥಳೀಯರು ಹರ್ಷೋದ್ಗಾರ ವ್ಯಕ್ತಪಡಿಸಿದರು. ಮೂರು ವಿಭಾಗಗಳಲ್ಲಿ ಮ್ಯಾರಥಾನ್ ಸ್ಪರ್ಧೆಯನ್ನು ಮೂರು ವಿಭಿನ್ನ ವಿಭಾಗಗಳಲ್ಲಿ ನಡೆಸಲಾಯಿತು. ೧೬ ವರ್ಷದೊಳಗಿನವರ ವಿಭಾಗ ಓಪನ್ ವಿಭಾಗ, ೪೦ ವರ್ಷ ಮೇಲ್ಪಟ್ಟವರ ವಿಭಾಗ, ಪ್ರತಿ ವಿಭಾಗದಲ್ಲೂ ಕಠಿಣ ಸ್ಪರ್ಧೆ ನಡೆಯಿತು. ಮೊದಲ ಸ್ಥಾನ ಗಳಿಸಿದವರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ಡಿವೈಎಸ್ಪಿ ಮುರುಳೀಧರ್ ಹಾಗೂ ಲಯನ್ಸ್ ಕ್ಲಬ್ ಹಾಸನಾಂಬ ಅಧ್ಯಕ್ಷ ಮೋಹನ್ ವಿತರಿಸಿದರು. ಅಕಾಡೆಮಿಯ ವೇಣುಗೋಪಾಲ್ ಮಾತನಾಡಿ, “ಗಣೇಶ ಪ್ರತಿಷ್ಠಾಪನೆಯ ಅಂಗವಾಗಿ ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಸೆಪ್ಟೆಂಬರ್ ೯ರವರೆಗೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಚೆಸ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕ್ರೀಡಾ ಮನೋಭಾವ ಬೆಳೆಸಲು ಹಾಗೂ ಯುವಕರಲ್ಲಿ ಸ್ಫೂರ್ತಿ ಮೂಡಿಸಲು ಈ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ಹೇಳಿದರು. ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಕಾರ್ಯಕ್ರಮವಷ್ಟೇ ಅಲ್ಲದೆ ಕ್ರೀಡಾ ಸಂಸ್ಕೃತಿಯೊಂದಿಗೆ ಬೆರೆಸಲು ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ ಮುಂದಾಗಿರುವುದು ಗಮನಾರ್ಹ. ಈ ಮೂಲಕ ಯುವಜನರಲ್ಲಿ ಕ್ರೀಡೆಗೆ ಆಸಕ್ತಿ ಮೂಡಿಸುವ ಜೊತೆಗೆ, ಸಮಾಜದಲ್ಲಿ ಆರೋಗ್ಯಕರ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಪ್ರತಿನಿಧಿಗಳು, ಕ್ರೀಡಾ ಅಭಿಮಾನಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಿದರು.