ಸಾರಾಂಶ
ಹಾವೇರಿ: ಡ್ರಗ್ಸ್ ಮುಕ್ತ ಕರ್ನಾಟಕ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಏರ್ಪಡಿಸಿದ್ದ 10ಕೆ ಮತ್ತು 5ಕೆ ಮ್ಯಾರಾಥಾನ್‌ಗೆ ಭಾನುವಾರ ನಗರದಲ್ಲಿ ಚಾಲನೆ ನೀಡಲಾಯಿತು.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದ ಎಡ ಭಾಗದ ಗೇಟ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಶಿರಕೋಳ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಾಥಾನ್‌ಗೆ ಚಾಲನೆ ನೀಡಿದರು.ಬಳಿಕ ಆರಂಭವಾದ 5ಕೆ ಮ್ಯಾರಾಥಾನ ಓಟ ಹೊಸಮನಿ ಸಿದ್ದಪ್ಪ ವೃತ್ತ, ಗುತ್ತಲ ಕ್ರಾಸ್, ಹುಕ್ಕೇರಿಮಠ ರಸ್ತೆ, ರೈಲು ನಿಲ್ದಾಣ, ಸಿಂದಗಿ ಮಠದ ಕ್ರಾಸ್, ಅಂಬೇಡ್ಕರ ಸರ್ಕಲ್, ಸುಭಾಸ ಸರ್ಕಲ್, ಬಸವೇಶ್ವರ ಸರ್ಕಲ್, ಜೆ.ಎಚ್. ಪಟೇಲ್ ವೃತ್ತ, ಜಿಲ್ಲಾ ಕ್ರೀಡಾಂಗಣದ ಮೊದಲ ಗೇಟ್, ಮೋರ್ ಸೂಪರ್ ಮಾರ್ಕೆಟ್ ಬಳಿಯ ಪಿ.ಬಿ. ರಸ್ತೆ, ಚೆನ್ನಮ್ಮ ಸರ್ಕಲ್ ಹಾಗೂ ಎಸ್‌ಪಿ ಕಚೇರಿಗೆ ಮುಕ್ತಾಯಗೊಂಡಿತು.ಅದೇ ರೀತಿ 10ಕೆ ಮ್ಯಾರಾಥಾನ್ ಓಟ ಹೊಸಮನಿ ಸಿದ್ದಪ್ಪ ವೃತ್ತ, ಗುತ್ತಲ ಕ್ರಾಸ್, ಹುಕ್ಕೇರಿಮಠ ರಸ್ತೆ, ರೈಲು ನಿಲ್ದಾಣ, ಸಿಂದಗಿ ಮಠದ ಕ್ರಾಸ್, ಅಂಬೇಡ್ಕರ ಸರ್ಕಲ್, ಸುಭಾಸ ಸರ್ಕಲ್, ಬಸವೇಶ್ವರ ಸರ್ಕಲ್, ಜೆ.ಎಚ್. ಪಟೇಲ್ ವೃತ್ತ, ಪಿ.ಡಬ್ಲ್ಯುಡಿ ಕ್ವಾಟ್ರರ್ಸ್, ಕೆಎಲ್‌ಇ ಶಾಲೆ, ಲಕಮಾಪೂರ ದುಂಡಿಬಸವೇಶ್ವರ ದೇವಸ್ಥಾನ, ವಿನಾಯಕನಗರ, ಜಿ.ಎಚ್. ಕಾಲೇಜು, ವಾಲ್ಮೀಕಿ ಸರ್ಕಲ್, ಚೆನ್ನಮ್ಮ ಸರ್ಕಲ್ ಹಾಗೂ ಎಸ್‌ಪಿ ಆಫೀಸ್‌ನ್ನು ತಲುಪಿತು. ಮ್ಯಾರಾಥಾನ್ ಉದ್ದಕ್ಕೂ ಸೈಬರ್ ಅಪರಾಧ, ಮಾದಕ ಮುಕ್ತ ಕರ್ನಾಟಕ, ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಘೋಷವಾಕ್ಯಗಳ ಫಲಕಗಳು ರಾರಾಜಿಸಿದವು.ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ ವಿವಿಧ ಹಂತಗಳಲ್ಲಿ ಪ್ರಥಮವಾಗಿ ಓಟವನ್ನು ಮುಕ್ತಾಯಗೊಳಿಸಿದ ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರು ಸೇರಿದಂತೆ ಪ್ರಶಸ್ತಿ ಪತ್ರದೊಂದಿಗೆ 50 ಮೆಡಲ್‌ಗಳನ್ನು ವಿತರಣೆ ಮಾಡಲಾಯಿತು. ಓಟ ಮುಕ್ತಾಯಗೊಳಿಸಿದ ಇನ್ನುಳಿದ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ 450 ಜನರಿಗೆ ಪ್ರಶಸ್ತಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಹಣ್ಣು, ಕುಡಿಯುವ ನೀರಿನ ವ್ಯವಸ್ಥೆ, ಉಪಾಹಾರದ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.ಮ್ಯಾರಾಥಾನ್‌ನಲ್ಲಿ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ, ಹಾವೇರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ರೋಟರಿ ಕ್ಲಬ್, ಬಾರ್ ಅಸೋಸಿಯೇಷನ್, ಲಯನ್ಸ್ ಕ್ಲಬ್, ಎಸ್‌ಬಿಐ ಬ್ಯಾಂಕ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು, ಶಾಲಾ ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.