ಕ್ರಿಕೆಟ್ ಮೈದಾನಕ್ಕೆ ಒತ್ತಾಯಿಸಿ ಮೆಹಬೂಬ ಬಾಷಾ ಅವರಿಂದ ಬಳ್ಳಾರಿಯಿಂದ ಬೆಂಗಳೂರಿಗೆ ಮ್ಯಾರಥಾನ್!

| N/A | Published : Feb 18 2025, 12:34 AM IST / Updated: Feb 18 2025, 12:58 PM IST

ಕ್ರಿಕೆಟ್ ಮೈದಾನಕ್ಕೆ ಒತ್ತಾಯಿಸಿ ಮೆಹಬೂಬ ಬಾಷಾ ಅವರಿಂದ ಬಳ್ಳಾರಿಯಿಂದ ಬೆಂಗಳೂರಿಗೆ ಮ್ಯಾರಥಾನ್!
Share this Article
  • FB
  • TW
  • Linkdin
  • Email

ಸಾರಾಂಶ

ಮೆಹಬೂಬ ಬಾಷಾ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಮ್ಯಾರಥಾನ್ ಓಟದ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡಿದ್ದು, ಸೋಮವಾರ ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಂಗಳೂರಿನತ್ತ ಓಟ ಆರಂಭಿಸಿದರು.

  ಬಳ್ಳಾರಿ : ನಗರದಲ್ಲಿ ಕ್ರಿಕೆಟ್ ಮೈದಾನ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಎಸ್‌.ಎಸ್. ಕ್ರಿಕೆಟ್ ಕ್ಲಬ್ ಅಧ್ಯಕ್ಷ ಹಾಗೂ ಕ್ರಿಕೆಟ್ ತರಬೇತುದಾರ ಎಸ್‌.ಎಸ್. ಮೆಹಬೂಬ ಬಾಷಾ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಮ್ಯಾರಥಾನ್ ಓಟದ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡಿದ್ದು, ಸೋಮವಾರ ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಂಗಳೂರಿನತ್ತ ಓಟ ಆರಂಭಿಸಿದರು.

ಇದೇ ವೇಳೆ ಮಾತನಾಡಿದ ಮೆಹಬೂಬ ಬಾಷಾ, ಬಳ್ಳಾರಿ ನಗರದಲ್ಲಿ ಸಾಕಷ್ಟು ಜನ ಕ್ರೀಡಾ ಪ್ರತಿಭಾನ್ವಿತರಿದ್ದಾರೆ. ಆದರೆ, ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ. ಕ್ರಿಕೆಟ್ ಆಟಕ್ಕೆ ಮೈದಾನವಿಲ್ಲ. ಇದರಿಂದ ಅನೇಕ ಪ್ರತಿಭೆಗಳು ಸಾಧನೆ ಮಾಡದೆ ತೆರೆಮರೆಗೆ ಸರಿಯುತ್ತಿದ್ದಾರೆ. ಹಾಗಾಗಿ ಬಳ್ಳಾರಿಯಿಂದ ಮ್ಯಾರಥಾನ್‌ ಮೂಲಕ ಬೆಂಗಳೂರಿಗೆ ತೆರಳಿ, ಅಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ಮನವಿ ಸಲ್ಲಿಸಿ, ಬಳ್ಳಾರಿಯಲ್ಲೂ ಕ್ರಿಕೆಟ್ ಮೈದಾನ ಸೇರಿ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಪಾಲಿಕೆ ಸದಸ್ಯ ಎಂ. ಪ್ರಭಂಜನ್ ಕುಮಾರ್, ಬಳ್ಳಾರಿ ಸೈಕ್ಲಿಂಗ್ ಕ್ಲಬ್ ಸದಸ್ಯರು ಬಾಷಾ ಅವರ ಕ್ರೀಡಾ ಕಾಳಜಿಯನ್ನು ಪ್ರಶಂಸಿಸಿ ಬೀಳ್ಕೊಟ್ಟರು. 51ನೇ ವಯಸ್ಸಿನಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಮ್ಯಾರಥಾನ್ ಆರಂಭಿಸುವ ಮೂಲಕ ಮೆಹಬೂಬ ಬಾಷಾ ಅವರು ವಿಶಿಷ್ಟವಾದ ಹೋರಾಟ ಕೈಗೊಂಡಿದ್ದಾರೆ. ಅವರಿಗೆ ಶುಭವಾಗಲಿ. ಬಳ್ಳಾರಿಯಲ್ಲಿ ಕ್ರಿಕೆಟ್ ಸೇರಿದಂತೆ ಇತರ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ದೊರೆಯುವಂತಾಗಲಿ ಎಂದು ಹಾರೈಸಿದರು.

ಪ್ರತಿದಿನ ಬೆಳಗ್ಗೆ 20 ಕಿಮೀ, ಸಂಜೆ 20 ಕಿಮೀ ಒಟ್ಟು 40 ಕಿಮೀ ಓಡಲು ನಿರ್ಧರಿಸಿರುವ ಮೆಹಬೂಬ ಬಾಷಾ ಅವರು ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಬಳ್ಳಾರಿ ಸೈಕ್ಲಿಂಗ್ ಕ್ಲಬ್ ಜತೆಗೂಡಿದ್ದಾರೆ.