ದಯಾ ಮರಣ ಕೋರಿ ರಾಜಭವನಕ್ಕೆ ಪಾದಯಾತ್ರೆ

| Published : Aug 12 2025, 12:30 AM IST

ಸಾರಾಂಶ

ಚಿಕ್ಕಮಗಳೂರುಗೋಮಾಳ ಜಾಗವನ್ನು ಖಾಸಗಿಯವರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು ಇದನ್ನು ವಿರೋಧಿಸಿ ಜನ ಜಾನುವಾರುಗಳಿಗೆ ದಯಾ ಮರಣ ನೀಡುವಂತೆ ಚಿಕ್ಕಮಗಳೂರಿನಿಂದ ಬೆಂಗಳೂರಿನ ವಿಧಾನಸೌಧ ದವರೆಗೆ ಪಾದಯಾತ್ರೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎನ್.ಜಿ.ಉದ್ದೆಗೌಡ ಹೇಳಿದರು.

- ರೈತ ಸಂಘದ ಜಿಲ್ಲಾಧ್ಯಕ್ಷ ಎನ್.ಜಿ.ಉದ್ದೆಗೌಡ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗೋಮಾಳ ಜಾಗವನ್ನು ಖಾಸಗಿಯವರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು ಇದನ್ನು ವಿರೋಧಿಸಿ ಜನ ಜಾನುವಾರುಗಳಿಗೆ ದಯಾ ಮರಣ ನೀಡುವಂತೆ ಚಿಕ್ಕಮಗಳೂರಿನಿಂದ ಬೆಂಗಳೂರಿನ ವಿಧಾನಸೌಧ ದವರೆಗೆ ಪಾದಯಾತ್ರೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎನ್.ಜಿ.ಉದ್ದೆಗೌಡ ಹೇಳಿದರು.

ಆ. 13ರಂದು ಬೆಳಗ್ಗೆ 8 ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ ನೆರಡಿ ಗ್ರಾಮದಿಂದ 30 ರೈತರು ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದೇವೆ. ಚಿಕ್ಕಮಗಳೂರು, ಬೇಲೂರು, ಹಗರೆ, ಹಾಸನ, ಚನ್ನರಾಯಪಟ್ಟಣ, ಎಡೆಯೂರು, ನೆಲಮಂಗಲ ಮಾರ್ಗ ವಾಗಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಸಲಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೆರಡಿ ಗ್ರಾಮದ ಸರ್ವೆ ನಂ. 35ರಲ್ಲಿ 25 ಎಕರೆ 15 ಗುಂಟೆ ಮತ್ತು 2 ಎಕರೆ 20 ಗುಂಟೆ ಜಾಗ ಗೋಮಾಳವಾಗಿದೆ. ಹಿಂದಿ ನಿಂದಲೂ ಇಲ್ಲಿ ಜಾನುವಾರುಗಳು ಮೇಯ್ದುಕೊಂಡು ಬರುತ್ತಿದ್ದವು. ಆದರೆ, ಇದೀಗ ಆ ಜಾಗವನ್ನು ಪಿತೂರಿ ಮಾಡಿ ತಮ್ಮ ಹೆಸರಿಗೆ ಮಾಡಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಜಾನುವಾರುಗಳಿಗೆ ಮೇಯಲು ಜಾಗವಿಲ್ಲದೆ ಸಾಯುವ ಪರಿಸ್ಥಿತಿ ಎದುರಾಗಿದೆ. ರೈತರು ಜಾನುವಾರುಗಳನ್ನೇ ನಂಬಿಕೊಂಡಿರುವುದರಿಂದ ಜಾನುವಾರುಗಳಿಲ್ಲದೆ ಬದುಕಲು ಸಾಧ್ಯ ವಿಲ್ಲ. ಹೀಗಾಗಿ ಜಾನುವಾರುಗಳೊಂದಿಗೆ ರೈತರಿಗೂ ದಯಾ ಮರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಲಾಗುವುದು ಎಂದರು.

ಸಚಿವರು ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವಂತಿಲ್ಲ ಎನ್ನುತ್ತಾರೆ. ಆದರೆ ಇರುವ ಗೋಮಾಳ ಜಾಗ ಉಳ್ಳವರ ಪಾಲಾಗುತ್ತಿದೆ. ಕೂಡಲೇ ಗುಂಡು ತೋಪು, ಕೆರೆಕಟ್ಟೆ, ಡ್ಯಾಮ್ ಹಾಗೂ ಗೋಮಾಳ ಜಾಗಗಳು ಒತ್ತುವರಿ ಯಾಗಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ಧಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಮಹೇಶ್, ಬಸವರಾಜ್‌, ಕೆಂಪಮ್ಮ, ರಾಜೇಗೌಡ, ಸಂದೇಶ್, ನಿರಂಜನಮೂರ್ತಿ ಉಪಸ್ಥಿತರಿದ್ದರು.