ಸಾರಾಂಶ
ಹಿಂದೂ, ಮುಸ್ಲಿಂ ಎನ್ನುವ ಭೇದ-ಭಾವವಿಲ್ಲದೆ ಈ ದರ್ಗಾಕ್ಕೆ ಜನರು ನಡೆದುಕೊಳ್ಳುತ್ತಾರೆ. ಇಲ್ಲಿ ಭಕ್ತಿಯಿಂದ ಪೂಜಿಸಿದರೇ ಹರಕೆ ತೀರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ, ಇಲ್ಲಿಗೆ ಎಲ್ಲ ಸಮುದಾಯದ ಜನರು ಭಾಗಿಯಾಗುತ್ತಾರೆ.
ಕೊಪ್ಪಳ:
ನಗರದಲ್ಲಿರುವ ಮರ್ದಾನಗೈಬ್ ದರ್ಗಾ ಕೊಪ್ಪಳದ ಭಾವೈಕ್ಯತೆಯ ತಾಣವಾಗಿದ್ದು, ಗವಿಮಠದಂತೆ ಇದು ಸಹ ಬೆಳೆಯುತ್ತಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ನಗರದ ಹಜರತ್ ಮರ್ದಾನಗೈಬ್ ದರ್ಗಾದ ಉರೂಸ್ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂ, ಮುಸ್ಲಿಂ ಎನ್ನುವ ಭೇದ-ಭಾವವಿಲ್ಲದೆ ಈ ದರ್ಗಾಕ್ಕೆ ಜನರು ನಡೆದುಕೊಳ್ಳುತ್ತಾರೆ. ಇಲ್ಲಿ ಭಕ್ತಿಯಿಂದ ಪೂಜಿಸಿದರೇ ಹರಕೆ ತೀರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ, ಇಲ್ಲಿಗೆ ಎಲ್ಲ ಸಮುದಾಯದ ಜನರು ಭಾಗಿಯಾಗುತ್ತಾರೆ ಎಂದರು. ಮರ್ದಾನಗೈಬ್ ದರ್ಗಾ ಉರೂಸ್ ವರ್ಷದಿಂದ ವರ್ಷಕ್ಕೆ ವೈಭವದಿಂದ ಆಗುತ್ತಿದ್ದು, ಇನ್ನು ಗವಿಮಠದಂತೆಯೆ ಬೆಳೆಯುತ್ತಿದೆ ಎಂದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಮರ್ದಾನಗೈಬ್ ದರ್ಗಾ ಕೊಪ್ಪಳದ ಧಾರ್ಮಿಕ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿದೆ. ಇದು ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೇ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ಮರ್ದಾನಗೈಬ್ ದರ್ಗಾ ಸರ್ವಜನಾಂಗ ಶಾಂತಿಯ ತಾಣವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜ್ಯಾತ್ಯತೀತವಾಗಿ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ. ಜಾತಿ, ಮತ, ಪಂಥದ ಭೇದ ಇಲ್ಲದೆ ಸೇರುತ್ತಿರುವ ಭಕ್ತರು ಶ್ರದ್ಧಾಭಕ್ತಿಯಿಂದ ನಡೆದುಕೊಂಡು ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳುತ್ತಾರೆ ಎಂದು ಹೇಳಿದರು.ಯೂಸೂಫಿಯಾ ಮಸೀದಿಯ ಹಜರತ್ ಮುಪ್ತಿ ನಜೀರ್ ಮಹ್ಮದ್ ಖಾದ್ರಿ ತಸ್ಕಿನ್, ದರ್ಗಾ ಸಮಿತಿಯ ಅಧ್ಯಕ್ಷ ಕಾಟನ್ ಪಾಶಾ, ಅಮರೇಶ ಕರಡಿ, ಆಸಿಳ್ ಅಲಿ, ಪೀರಾಹುಸೇನ ಹೊಸಳ್ಳಿ, ಬಾಷಾಸಾಬ್ ಖತೀಬ್, ನೂರ ಭಾಷಾ, ಬಾಬಾ ಅರಗಂಜಿ ಸೇರಿದಂತೆ ಅನೇಕರು ಇದ್ದರು.