ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಹೊರವಲಯದ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಮಾರೇಹಳ್ಳಿ ಶ್ರೀಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ರಥೋತ್ಸವದ ಅಂಗವಾಗಿ ಲಕ್ಷ್ಮಿ ಹಾಗೂ ನರಸಿಂಹಸ್ವಾಮಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ, ಮಜ್ಜನ ಸೇವೆಗಳನ್ನು ನೆರವೇರಿಸಿದ ನಂತರ ವಿವಿಧ ಆಭರಣ, ಹೂವು ಹಾಗೂ ಹಣ್ಣುಗಳಿಂದ ದೇವರನ್ನು ಅಲಂಕರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ಹೂವಿನಿಂದ ಆಲಂಕರಿಸಿ ವಿಶೇಷ ಪೂಜೆಯೊಂದಿಗೆ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ತಹಸೀಲ್ದಾರ್ ಲೋಕೇಶ್ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಸಾವಿರಾರು ಭಕ್ತರು ಹಣ್ಣು ಜವನ ಎಸೆತು ಭಕ್ತಿ ಸಮರ್ಪಿಸಿದರು.ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಸುತ್ತಲು ಒಂದು ಸುತ್ತು ರಥವನ್ನು ಎಳೆಯಲಾಯಿತು. ಮಹದೇಶ್ವರ, ದಾಸಪ್ಪ, ಜೋಗಪ್ಪ ಗುಡ್ಡರು ತಮ್ಮ ದೇವರ ಬಿರುದುಗಳೊಂದಿಗೆ ರಥದ ಮೆರವಣಿಗೆಯಲ್ಲಿ ಪಾಲ್ಗೊಂಡು ಬ್ರಹ್ಮ ರಥೋತ್ಸವನ್ನು ಯಶಸ್ವಿಯಾಗಿಸಿದರು.
ಹೊಸದಾಗಿ ಮದುವೆಯಾದ ಜೋಡಿಗಳು ಹಣ್ಣು ಜವನ ಎಸೆದರೇ ಕೆಲವು ಭಕ್ತರು ತಮ್ಮ ಇಷ್ಟರ್ಥನೆರೆವೇರಲಿ ಎಂದು ಬಾಳೆಹಣ್ಣಿನಲ್ಲಿ ತಮ್ಮ ಕೋರಿಕೆಯನ್ನು ಬರೆದು ರಥಕ್ಕೆ ಎಸೆಯುತ್ತಿರುವುದು ಕಂಡು ಬಂದಿತು.
ವೈಭವದ ರಥೋತ್ಸವಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾದರು. ಹರಕೆ ವೊತ್ತ ಭಕ್ತರು ಅನ್ನಸಂತರ್ಪಣೆ ನಡೆಸಿದರು.
1200 ವರ್ಷಗಳಿಗಿಂತಲೂ ಹಳೆಯ ದೇವಸ್ಥಾನ ಚೋಳನ ಕಾಲದಲ್ಲಿ ಜೀರ್ಣೋದ್ಧಾರಗೊಂಡಿದೆ ಎಂಬ ಉಲ್ಲೇಖವಿದೆ. ಪ್ರಾಚೀನ ಸ್ಮಾರಕ ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 1958ರ ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರಿಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ಇಲ್ಲಿನ ಮೂಲ ದೇವರಾದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯನ್ನು ಸ್ಥಳೀಯರು ಪ್ರೀತಿಯಿಂದ ಮಾರೇಹಳ್ಳಿ ಮುದುಕಪ್ಪ ಹಾಗೂ ಸೌಮ್ಯ ನರಸಿಂಹಸ್ವಾಮಿ ಎಂದೂ ಕರೆಯುತ್ತಾರೆ ಎನ್ನಲಾಗಿದೆ.ಶಾಸಕ ಪಿ.ಎಂ.ನರೇಂದ್ರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು.
ರಥೋತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು. ರಥದ ಚಕ್ರದ ಹತ್ತಿರ ಭಕ್ತರು ಬಾರದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು.12 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನರಸಿಂಹಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ತೇಪ್ಪೋತ್ಸವಗಳು ಭಕ್ತಿ ಪ್ರಧಾನವಾಗಿ ನಡೆಯಲಿವೆ. ಕೊನೆ ದಿನದಂದು ಸಿದ್ದಾರ್ಥನಗರದ ಭಕ್ತರಿಂದ ಸೊಪ್ಪು ಉಪ್ಪುಸಾರು ಮುದ್ದೆಯನ್ನು ದೇವರಿಗೆ ನೈವೇದ್ಯ ಅರ್ಪಿಸುವ ಮೂಲಕ ಜಾತ್ರ ಮಹೋತ್ಸವಕ್ಕೆ ತೆರೆಕಾಣಲಿದೆ.