ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಅದರ ಕಾರ್ಯವೈಖರಿ ತೀವ್ರ ಅನುಮಾನ ಮೂಡಿಸಿದೆ. ನುಸುಳುಕೋರರನ್ನು ಪತ್ತೆ ಹಚ್ಚುವುದನ್ನು ಬಿಟ್ಟು ದೇಶದ ನಾಗರಿಕರನ್ನೇ ಅನುಮಾನ ರೀತಿಯಲ್ಲಿ ನೋಡಲಾಗುತ್ತಿದೆ. ಬಡವರು ಮತ್ತು ತಳ ಸಮುದಾಯದವರು ಎಸ್ಐಆರ್‌ನಿಂದ ಪರದಾಡುವಂತಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಅದರ ಕಾರ್ಯವೈಖರಿ ತೀವ್ರ ಅನುಮಾನ ಮೂಡಿಸಿದೆ. ನುಸುಳುಕೋರರನ್ನು ಪತ್ತೆ ಹಚ್ಚುವುದನ್ನು ಬಿಟ್ಟು ದೇಶದ ನಾಗರಿಕರನ್ನೇ ಅನುಮಾನ ರೀತಿಯಲ್ಲಿ ನೋಡಲಾಗುತ್ತಿದೆ. ಬಡವರು ಮತ್ತು ತಳ ಸಮುದಾಯದವರು ಎಸ್ಐಆರ್‌ನಿಂದ ಪರದಾಡುವಂತಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆರೋಪಿಸಿದರು.ಸ್ಥಳೀಯ ಎಪಿಎಂಸಿ ಪ್ರಾಂಗಣದಲ್ಲಿರುವ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಒಂದುವರೆ ತಿಂಗಳಲ್ಲಿಯೇ ಐದುವರೆ ಕೋಟಿ ಮತದಾರರ ಎಸ್ಐಆರ್ ಪ್ರಕ್ರಿಯೆ ಮಾಡಲು ಸಾಧ್ಯವೇ? ಈ ಎಸ್ಐಆರ್ ಬಗ್ಗೆ ಚುನಾವಣಾ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಅವರಿಗೆ ಮಾಹಿತಿ ಇಲ್ಲ. ಬದುಕಿದ್ದವರನ್ನು ಸತ್ತವರೆಂದು, ಹೊಟ್ಟೆ ಪಾಡಿಗಾಗಿ ದುಡಿಯಲು ವಲಸೆ ಹೋದವರನ್ನು ಶಿಫ್ಟೆಡ್ ಎಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿ ಸಂವಿಧಾನಬದ್ಧ ಮತದಾನದ ಹಕ್ಕು ಕಸಿಯಲಾಗುತ್ತಿದೆ ಎಂದು ಆಪಾದಿಸಿದರು.
ನಂತರ ರೈತ ಸಂಘದ ರಾಜ್ಯ ಮುಖಂಡ ವೀರಸಂಗಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕೇಳಿದ ಪ್ರಶ್ನೆಗಳಿಗೆ ನಟ ಪ್ರಕಾಶ್ ರಾಜ್ ಉತ್ತರಿಸಿದರು. ಸಾಹಿತಿ ಕೃಷ್ಣಮೂರ್ತಿ ಬಳಿಗಾರ, ಎದ್ದೇಳು ಕರ್ನಾಟಕ ಸಂಘಟನೆಯ ಸಂಚಾಲಕ ಕುಮಾರ ಸಮತಳ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರು ಹಾಗೂ ಅನೇಕರು ಇದ್ದರು.