ತೋಟಗಾರಿಕೆ ಕ್ಷೇತ್ರಕ್ಕೆ ಮರಿಗೌಡರ ಪಾತ್ರ ಅಪಾರ

| Published : Aug 10 2024, 01:33 AM IST

ಸಾರಾಂಶ

ದೇಶದಲ್ಲಿಯೇ ಅತೀ ಹೆಚ್ಚು ತೋಟಗಾರಿಕಾ ಕ್ಷೇತ್ರ ಹೊಂದಿರುವಂತಹ ರಾಜ್ಯವನ್ನಾಗಿಸಲು ಪ್ರಯತ್ನಿಸಿದ ಖ್ಯಾತಿ ಡಾ.ಎಮ್.ಹೆಚ್. ಮರಿಗೌಡ ಅವರಿಗೆ ಸಲ್ಲುತ್ತದೆ ಎಂದು ಕುಲಪತಿ ಡಾ.ವಿಷ್ಣುವರ್ಧನ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದಲ್ಲಿಯೇ ಅತೀ ಹೆಚ್ಚು ತೋಟಗಾರಿಕಾ ಕ್ಷೇತ್ರ ಹೊಂದಿರುವಂತಹ ರಾಜ್ಯವನ್ನಾಗಿಸಲು ಪ್ರಯತ್ನಿಸಿದ ಖ್ಯಾತಿ ಡಾ.ಎಮ್.ಹೆಚ್. ಮರಿಗೌಡ ಅವರಿಗೆ ಸಲ್ಲುತ್ತದೆ ಎಂದು ಕುಲಪತಿ ಡಾ.ವಿಷ್ಣುವರ್ಧನ ತಿಳಿಸಿದರು.

ಡಾ.ಎಂ. ಹೆಚ್ ಮರಿಗೌಡ ಅವರ 108ನೇ ಜನ್ಮದಿನದ ಪ್ರಯುಕ್ತ ತೋಟಗಾರಿಕಾ ದಿನವನ್ನಾಗಿ ಆಚರಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ತೋಟಗಾರಿಕೆ ಇಲಾಖೆಯನ್ನು ಕೃಷಿ ಇಲಾಖೆಗೆ ಸಮನಾಗಿ ಪ್ರಾರಂಭಿಸಿದ ಹಾಗೂ ಬೆಂಗಳೂರು ನಗರವನ್ನು ಉದ್ಯಾನನಗರಿಯನ್ನಾಗಿ ಮಾಡಿದ ಕೀರ್ತಿ ಮರಿಗೌಡ ಅವರಿಗೆ ಸಲ್ಲುತ್ತದೆ. ಅಲ್ಲದೇ ಪ್ರಥಮ ತೋಟಗಾರಿಕಾ ಇಲಾಖೆಯ ನಿರ್ದೇಶಕರಾಗಿ ತಮ್ಮ ನಿವೃತ್ತಿ ಜೀವನದೂದ್ದಕ್ಕೂ ಕಾರ್ಯನಿರ್ವಹಿಸಿರುತ್ತಾರೆ ಎಂದು ಹೇಳಿದರು.

ರಾಜ್ಯದ ಉದ್ದಗಲಕ್ಕೂ ತೋಟಗಾರಿಕೆ ಬೆಳೆಗಳ ಬೇಸಾಯವನ್ನು ವಿಸ್ತರಿಸಿ ಹಣ್ಣು, ತರಕಾರಿ ಫಲಪುಷ್ಪಗಳು ಜನಸಾಮಾನ್ಯರಿಗೂ ಸುಲಭವಾಗಿ ಕೈಗೆಟುಕುವಂತೆ ಮಾಡಿದರು. ಅನೇಕ ಜಾತಿಯ ಹೊಸ ಸೊಪ್ಪಿನ ಬೀಜಗಳು, ಗಿಡಗಳು ರೈತರಿಗೆ ಉಚಿತವಾಗಿ ದೊರಕುವ ವ್ಯವಸ್ಥೆಮಾಡಿದರು. ತೋಟಗಾರಿಕೆ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಘಟಕಗಳನ್ನು ಹುಟ್ಟುಹಾಕಿ, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ತೋಟಗಾರಿಕಾ ಉತ್ಪಾದಕರ ಸಹಕಾರಿ ಮಾರಾಟ ಮಳಿಗೆ ಮತ್ತು ಸಹಕಾರ ಸಂಘ (ಹಾಪಕಾಮ್ಸ್) ಗಳನ್ನು ಸ್ಥಾಪಿಸಲು ಕಾರಣೀಭೂತರಾದರು. ರಾಜ್ಯದ ಮೂಲೆ ಮೂಲೆಗಳಲ್ಲಿ ಆಯಾ ಕ್ಷೇತ್ರದ ಹವಾಮಾನಕ್ಕನುಗುಣವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಿದರೆಂದು ತಿಳಿಸಿ, ತೋಟಗಾರಿಕೆ ಬೆಳೆಗಳ ಮಹತ್ವ, ಪೌಷ್ಟಿಕ ಆಹಾರಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಕೀರ್ತಿ ಹಾಗೂ ನಿರ್ಮಿಸಿರುವ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆಂದು ಹೇಳಿದರು.ದ್ವಿತೀಯ ವರ್ಷದ ಬಿ.ಎಸ್.ಸಿ. ವಿದ್ಯಾರ್ಥಿ ಹುಸೇನಬಾಷಾ ಡಾ. ಎಂ. ಹೆಚ್. ಮರಿಗೌಡರವರ ಜೀವನ ಚರಿತ್ರೆ ಮತ್ತು ತೋಟಗಾರಿಕಾ ಕ್ಷೇತ್ರದಲ್ಲಿ ಅವರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ. ಎನ್.ಕೆ.ಹೆಗಡೆ, ಡಾ.ಹೆಚ್.ಪಿ.ಮಹೇಶ್ವರಪ್ಪ, ಡಾ.ಟಿ.ಬಿ.ಅಳ್ಳೊಳ್ಳಿ, ಡಾ. ಲಕ್ಷ್ಮೀನಾರಾಯಣ ಹೆಗಡೆ, ಡಾ. ರಾಮಚಂದ್ರ ನಾಯ್ಕ ಕೆ. ಡೀನ್,. ಡಾ. ಎಮ್. ಎಸ್. ಲೋಕೇಶ, ಡಾ. ಆನಂದ ಮಾಸ್ತಿಹೊಳಿ, ಡಾ. ಶಾಂತಪ್ಪ ಟಿ., ರವೀಂದ್ರ ವಾಯ್. ಕಾಂಬಳೆ, ಉಪಸ್ಥಿತರಿದ್ದರು. ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ತೋ.ವಿ.ವಿ ಬಾಗಲಕೋಟ ಮುಖ್ಯ ಆವರಣ ಹಾಗೂ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.

ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಮೋನಿಕಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗುರುಬಸಮ್ಮ ಸ್ವಾಗತಿಸಿದರು. ಕುಸುಮಾ ವಂದಿಸಿದರು. ಹಮೀದಾ ಬೇಗಮ್‌ ರೂಪಿಸಿದರು.

ರಾಷ್ಟ್ರೀಯ ಸೇವಾ ಯೋಜಾನಾಧಿಕಾರಿ ಡಾ. ನೂರುಲ್ಲಾ ಹಾವೇರಿ, ಸಹಾಯಕ ಪ್ರಾಧ್ಯಾಪಕಿ ಡಾ. ಗಿರಿಜಾ ಯಂಡಿಗೇರಿ ಇತರರು ಇದ್ದರು.