ಸಾರಾಂಶ
ಭಟ್ಕಳ: ಶಿರಾಲಿಯ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಸುಪ್ರಸಿದ್ಧ 6ನೇ ಮಾರಿಜಾತ್ರಾ ಮಹೋತ್ಸವ ಜ. 14 ಮತ್ತು 15ರಂದು ವಿಜೃಂಭಣೆಯಿಂದ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಮಾರಿಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮಾ ಎಂ. ಮೊಗೇರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಳ್ವೆಕೋಡಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಮಾರಿ ಜಾತ್ರೆ ತನ್ನದೇ ಆದ ಇತಿಹಾಸ ಹೊಂದಿದೆ. ದೇವಿಯ ಅಣತಿಯಂತೆ ಈ ಬಾರಿ ಜ. 14 ಮತ್ತು 15ರಂದು ಮಾರಿ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಿಂದ ನಡೆಸಲು ನಿರ್ಧರಿಸಲಾಗಿದೆ. ಮಾರಿ ಜಾತ್ರೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಲಾಗುತ್ತಿದೆ. ಜ. 13ರಂದು ಸಂಜೆ ೩ ಗಂಟೆಗೆ ಭಕ್ತಾದಿಗಳು ಸೇರಿ ದುರ್ಗಾಪರಮೇಶ್ವರಿ ಅಮ್ಮನವರನ್ನು ಪ್ರಾರ್ಥಿಸಿಕೊಂಡು ಗುಡಿಹಿತ್ಲು ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪ್ರಸಾದವನ್ನು ತೆಗೆದುಕೊಂಡು ಬೈಕ್ ರ‍್ಯಾಲಿಯಲ್ಲಿ ಶಿರಾಲಿ, ಸಾರದಹೊಳೆ, ಮಾವಿನಕಟ್ಟೆ, ಯಕ್ಷಿಮನೆ, ಸಣಬಾವಿ, ಶ್ರೀರಾಮ ಭಜನಾ ಮಂದಿರಕ್ಕೆ ಬಂದು ಅಲ್ಲಿಂದ ಕಾಲ್ನಡಿಗೆಯಲ್ಲಿ ಹೊರೆ ಕಾಣಿಕೆಯೊಂದಿಗೆ ದೇವಸ್ಥಾನಕ್ಕೆ ಬರಲಾಗುವುದು.ಹೊರೆ ಕಾಣಿಕೆ ಸ್ವೀಕಾರ ನಂತರ ಮಾರಿಕಾಂಬಾ ಮೂರ್ತಿ ಮತ್ತು ಮಾತಂಗಿ ಮೂರ್ತಿಯನ್ನು ಸಂಜೆ ೭ ಗಂಟೆಗೆ ಗದ್ದುಗೆಗೆ ಕರೆದೊಯ್ಯುವುದು. ದೇವಿಯಲ್ಲಿ ದೀಪ ಸ್ಥಾಪನೆ, ಮಹಾಪ್ರಾರ್ಥನೆ, ಫಲ ಸಮರ್ಪಣೆ, ಅಡುಗೆ ಛತ್ರದಲ್ಲಿ ಒಲೆಗೆ ಅಗ್ನಿ ಪ್ರತಿಷ್ಠಾಪನೆ ಹಾಗೂ ಮಾರಿಕಾಂಬಾ ಪ್ರತಿಷ್ಠಾಪನಾ ಸ್ಥಾನದಲ್ಲಿ ಗಣಪತಿ ಪೂಜನಾ, ಪುಣ್ಯಾಹವಾಚನ, ಸ್ಥಳ ಶುದ್ಧಿ, ರಾಕ್ಷೋಘ್ನ ಹವನ, ದೀಕ್ಪಾಲಬಲಿ, ಹೊಸ ಆಭರಣಗಳ ಸಮರ್ಪಣೆ ಇದೆ.
ಜ. 14ರಂದು ಬೆಳಗ್ಗೆ ೬ ಗಂಟೆಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜ್ಯನಾ, ಪುಣ್ಯಾಹವಾಚನ, ನಾಂದಿ ಸಮಾರಾಧನೆ, ಪೂರ್ವಹ್ನ ೮ಕ್ಕೆ ಪೂರ್ಣಕಲಶದೊಂದಿಗೆ ಮಾರಿಕಾಂಬೆಗೆ ಪ್ರಾಣ ಪ್ರತಿಷ್ಠಾಪನೆ, ಮಂಗಳಾಷ್ಠಕ, ವೇದಘೋಷ, ವಾದ್ಯಗಳೊಂದಿಗೆ ಮಹಾಮಂಗಳಾರತಿ ನಂತರ ಆಡಳಿತ ಕಮಿಟಿ, ಮಾರಿ ಜಾತ್ರಾ ಕಮಿಟಿಯವರಿಗೆ ಮಾರಿಕಾಂಬಾ ದೇವಿಯ ಪ್ರಸಾದ ವಿತರಣೆ ನಂತರ ಭಕ್ತಾದಿಗಳ ಸೇವೆ ಪ್ರಾರಂಭ ಆಗಲಿದೆ. ೧೧.೩೦ಕ್ಕೆ ಮಾರಿಕಾಂಬಾ ದೇವಿಯ ಸಾನ್ನಿಧ್ಯದಲ್ಲಿ ನೈವೇದ್ಯ ಮತ್ತು ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ೪.೩೦ಕ್ಕೆ ಭಜನಾ ಕಾರ್ಯಕ್ರಮ. ರಾತ್ರಿ ೯ ಗಂಟೆಗೆ ಪ್ರಸಿದ್ಧ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಇರುತ್ತದೆ. ಜ. 15ರಂದು ಬೆಳಗ್ಗೆ ೭ರಿಂದ ಸುಪ್ರಭಾತ ಪೂಜೆ, ಭಕ್ತಾದಿಗಳಿಂದ ಸೇವೆ ಪ್ರಾರಂಭ, ೧೧.೩೦ಕ್ಕೆ ಮಾರಿಕಾಂಬಾ ದೇವಿಯಲ್ಲಿ ನೈವೇದ್ಯ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಂತರ ಸಂಜೆ ೫ ಗಂಟೆಗೆ ಮಾರಿಕಾಂಬಾ ಮೂರ್ತಿ ಮತ್ತು ಮಾತಾಂಗಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ತಿಮ್ಮಪ್ಪ ಹೊನ್ನಿಮನೆ, ನಾರಾಯಣ ದೈಮನೆ, ಹನುಮಂತ ನಾಯ್ಕ, ಮಾರಿ ಜಾತ್ರಾ ಸಮಿತಿಯ ಪ್ರಮುಖರಾದ ಬಿಳಿಯಾ ನಾಯ್ಕ, ದೇವಪ್ಪ ಮೊಗೇರ, ಬಾಬು ಮೊಗೇರ, ವಿಠಲ್ ದೈಮನೆ, ರಾಜು ಮೊಗೇರ ಮುಂತಾದವರಿದ್ದರು.