ಮರಿಯಮ್ಮನಹಳ್ಳಿ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರ

| Published : Oct 20 2024, 01:58 AM IST

ಮರಿಯಮ್ಮನಹಳ್ಳಿ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರ
Share this Article
  • FB
  • TW
  • Linkdin
  • Email

ಸಾರಾಂಶ

ನೀರಿನ ವ್ಯವಸ್ಥೆ ಕಲ್ಪಿಸಲು ಇದುವರೆಗೂ ಯಾವ ಅಧಿಕಾರಿಗಳು ಮುಂದಾಗಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಮರಿಯಮ್ಮನಹಳ್ಳಿ: ಪಟ್ಟಣದ ಬಸ್‌ ನಿಲ್ದಾಣವು ಯಾವ ಮೂಲಭೂತ ವ್ಯವಸ್ಥೆಗಳು ಇಲ್ಲ. ನಿಲ್ದಾಣವು ಅವ್ಯವಸ್ಥೆಯ ಆಗರವಾಗಿದೆ.ನಿಲ್ದಾಣದಲ್ಲಿ ವ್ಯವಸ್ಥಿತವಾದ ಆಟೋ ನಿಲ್ದಾಣವಿಲ್ಲ. ಬೈಕ್‌ ಸ್ಟಾಂಡ್‌ ಇಲ್ಲ. ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಬೈಕ್‌ ನಿಲ್ಲಿಸುವುರಿಂದ ಅಂಗಡಿಗಳಿಗೆ ಬರುವ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಕೆಲ ಬಾರಿ ಸಾರ್ವಜನಿಕರಿಗೆ ಬೈಕ್‌, ಆಟೋ ಡಿಕ್ಕಿ ಹೊಡೆದು ಸಣ್ಣಪುಟ್ಟ ಗಾಯಗಳಾದ ಘಟನೆಗಳು ಈ ಹಿಂದೆ ನಡೆದಿವೆ.ಬಸ್‌ ನಿಲ್ದಾಣದ ಪಕ್ಕದಲ್ಲೇ ಹಳೇ ಬಸ್‌ ನಿಲ್ದಾಣ (ಶೆಲ್ಟರ್‌) ಇದ್ದು, ಅದು ಯಾವುದೇ ರೀತಿ ಉಪಯೋಗವಾಗುತ್ತಿಲ್ಲ. ಈ ಸ್ಥಳದಲ್ಲಿ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡಿ ಸುತ್ತಮುತ್ತಲಿನ ವಾತಾವರಣವನ್ನು ಅಶುದ್ಧಗೊಳಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರು ಮುಜುಗರಕ್ಕೆ ಒಳಪಡುವಂತಾಗಿದೆ.

ಇದರ ಪಕ್ಕದಲ್ಲೇ ಶುದ್ಧ ಕುಡಿಯುವ ನೀರಿನ ಘಟಕವಿದೆ. ಅದು ಈವರೆಗೂ ಬಳಕೆಯಾಗುತ್ತಿಲ್ಲ. ಶುದ್ದ ನೀರಿನ ಘಟಕಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಕೇವಲ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆಯೇ ಹೊರತು ಅದಕ್ಕೆ ನೀರಿನ ಪೂರೈಕೆಯಿಲ್ಲದೇ ಶುದ್ಧ ಕುಡಿಯುವ ನೀರಿನ ಘಟಕ ತುಕ್ಕು ಹಿಡಿಯುತ್ತಿದೆ. ನೀರಿನ ವ್ಯವಸ್ಥೆ ಕಲ್ಪಿಸಲು ಇದುವರೆಗೂ ಯಾವ ಅಧಿಕಾರಿಗಳು ಮುಂದಾಗಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎನ್ನುತ್ತಾರೆ ಪ್ರಯಾಣಿಕರು.

ಬಸ್ ನಿಲ್ದಾಣದಲ್ಲಿ ನೆಪಕ್ಕೆ ಮಾತ್ರ ಶೌಚಾಲಯ ಇದೆ. ಆದರೆ ಸರಿಯಾದ ನಿರ್ವಹಣೆ ಆಗದೇ ಗಬ್ಬು ನಾರುತ್ತಿದೆ. ಆಗಾಗ ಶೌಚಾಲಯದ ಗುಂಡಿಗಳು ತುಂಬಿ ಗಲೀಜು ಹೊರ ಚೆಲ್ಲಿ ಅಕ್ಕಪಕ್ಕದ ಅಂಗಡಿ ಮುಂಗಟ್ಟಿನವರಿಗೆ ವಾಸನೆ ಬೀರುತ್ತಿದೆ.

ನಿಲ್ದಾಣ ರಸ್ತೆ ಪಕ್ಕದಲ್ಲೇ ಚರಂಡಿ ಗುಂಡಿ ಬಿದ್ದು ವರ್ಷಗಳೇ ಗತಿಸಿದರೂ ಈ ಗುಂಡಿ ಮುಂಚಲು ಮುಂದಾಗುತ್ತಿಲ್ಲ. ಬಸ್‌ ಬಂದು ಚರಂಡಿ ಪಕ್ಕದಲ್ಲೇ ನಿಲ್ಲುತ್ತೆ. ಒಂದೊಂದು ಸಾರಿ ಬಸ್‌ ಇಳಿಯುವ ಪ್ರಯಾಣಿಕರು ಚರಂಡಿ ಗುಂಡಿಯಲ್ಲಿ ಕಾಲು ಇಟ್ಟು ಬಿದ್ದ ಘಟನೆಗಳು ಸಂಭವಿಸಿವೆ.

ಒಮ್ಮೊಮ್ಮೆ ಚರಂಡಿ ನೀರು ಬಸ್‌ ನಿಲ್ದಾಣದ ಪ್ರದೇಶದಲ್ಲಿ ಹರಿದಾಡುತ್ತಿರುವುದರಿಂದ ಪ್ರಯಾಣಿಕರು ಚರಂಡಿ ನೀರಿನಲ್ಲೇ ನಡೆದುಕೊಂಡು ಹೋಗಿ ಬಸ್‌ ಹತ್ತಿಕೊಳ್ಳಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಬಸ್‌ ನಿಲ್ದಾಣವು ಹಲವರಿಗೆ ಹರಟೆ ಹೊಡೆಯುವ ಮತ್ತು ಕುಡುಕರ ಅಡ್ಡೆಯಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಇಲ್ಲಿ ಯಾರೂ ಕಸ ಗುಡಿಸುವುದಿಲ್ಲ. ಇದುವರೆಗೂ ಬಸ್‌ ನಿಲ್ದಾಣದಲ್ಲಿರುವ ನೆಲಕ್ಕೆ ಹಾಸಿರುವ ಟೈಲ್ಸ್‌ ಸ್ವಚ್ಛಗೊಳಿಸಿಯೇ ಇಲ್ಲ. ನಿಲ್ದಾಣದ ಟೈಲ್ಸ್‌ಗಳ ಮೇಲೆ ಬಿಡಾಡಿ ದನಗಳು ಸಗಣಿ ಹಾಕಿ ಹೋಗಿದ್ದರೂ ಅದನ್ನು ಜನರು ತುಳಿದುಕೊಂಡೇ ನಡೆದಾಡಿದರೂ ಬಸ್‌ ನಿಲ್ದಾಣ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲವೆನ್ನುವಂತೆ ನಿರ್ಲಕ್ಷಿಸುತ್ತಿದ್ದಾರೆ.