ಸಾರಾಂಶ
ಪ್ರತಿವರ್ಷವೂ ಇಲ್ಲಿನ ರಥವನ್ನು ಮಹಿಳೆಯರೇ ಎಳೆಯುವುದು ಸಂಪ್ರದಾಯ. ಅದೇ ರೀತಿ ಈ ವರ್ಷವೂ ಮಹಿಳೆಯರು ರಥವನ್ನು ಎಳೆದು ಪುನೀತರಾದರು.
ಕನ್ನಡಪ್ರಭ ವಾರ್ತೆ ಸಿರುಗುಪ್ಪ
ತಾಲೂಕಿನ ಮಿಟ್ಟೆಸೂಗೂರು ಗ್ರಾಮದ ಅಧಿದೇವತೆ ಮಾರಿಕಾಂಬೆಯ ರಥೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು. ರಥವನ್ನು ಮಹಿಳೆಯರೇ ಎಳೆದದ್ದು ವಿಶೇಷವಾಗಿತ್ತು.ಮಾರಿಕಾಂಬೆಯ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವವು ಸಿಂಹದ ಕಟ್ಟೆಯವರೆಗೆ ಸಾಗಿ ಮರಳಿ ಸ್ವಸ್ಥಾನಕ್ಕೆ ಆಗಮಿಸಿತು. ನೆರೆದಿದ್ದ ಭಕ್ತರು ಜಯಘೋಷ ಕೂಗಿ ಭಕ್ತಿ ಸಮರ್ಪಿಸಿದರು.
ರಥೋತ್ಸವಕ್ಕಿಂತ ಮುನ್ನ ವಿಜಯದಶಮಿ ಅಂಗವಾಗಿ ವಿವಿಧ ಫಲಪುಷ್ಪ, ಆಭರಣಗಳು ಹಾಗೂ ವೀಳ್ಯದೆಲೆಗಳಿಂದ ಸಿಂಗರಿಸಿ ಮಹಾಮಂಗಳಾರತಿ ಮಾಡಲಾಯಿತು. ಬಳಿಕ ಸಾಲಾಗಿ ನಿಂತ ಮಹಿಳೆಯರು ರಥವನ್ನು ಎಳೆದು ಪುನೀತರಾದರು. ಪ್ರತಿವರ್ಷವೂ ಇಲ್ಲಿನ ರಥವನ್ನು ಮಹಿಳೆಯರೇ ಎಳೆಯುವುದು ಸಂಪ್ರದಾಯ. ಅದೇ ರೀತಿ ಈ ವರ್ಷವೂ ಮಹಿಳೆಯರು ರಥವನ್ನು ಎಳೆದು ಪುನೀತರಾದರು.