ಕನ್ನಡಪ್ರಭ ವಾರ್ತೆ ಸಕಲೇಶಪುರತಾಲೂಕಿನ ಬಾಳ್ಳುಪೇಟೆ ಸಮೀಪದ ಮೆಣಸಮಕ್ಕಿ ಗ್ರಾಮದಲ್ಲಿ ಶ್ರೀ ನಾಗಲಿಂಗೇಶ್ವರ ಸ್ವಾಮಿ ಹಾಗೂ ಮಾರಿದುರ್ಗಮ್ಮನವರ ದೇವಾಲಯದ ಪುನರ್‌ಪ್ರತಿಷ್ಠಾಪನಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಜವೇನಹಳ್ಳಿ ವಿರಕ್ತ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತೀಯರು ಜಗತ್ತಿಗೆ ಸಂಸ್ಕೃತಿ, ನಾಗರಿಕತೆ ಹಾಗೂ ಬದುಕುವ ಕಲೆಯನ್ನು ಪರಿಚಯಿಸಿದವರು. ದೇಶ ಉಳಿಯಬೇಕಾದರೆ ಹಿಂದೂ ಧರ್ಮ ಉಳಿಯಬೇಕು. ಈ ನಿಟ್ಟಿನಲ್ಲಿ ದೇಶದಾದ್ಯಂತ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ಹಿಂದೂ ಧರ್ಮವು ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರತೀಕವಾಗಿದ್ದು, ಪ್ರತಿಯೊಬ್ಬರೂ ಸಂಸ್ಕೃತಿಯೊಂದಿಗೆ ಜೀವನ ನಡೆಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಭಾರತೀಯ ಸಂಸ್ಕೃತಿಯನ್ನು ಇತರ ರಾಷ್ಟ್ರಗಳೂ ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೋಧಿಸಬೇಕು ಎಂದು ಸಲಹೆ ನೀಡಿದರು.ಹಿಂದೂ ಧರ್ಮದ ಆಚರಣೆಗಳಲ್ಲಿ ವೈಜ್ಞಾನಿಕತೆ ಅಡಗಿದ್ದು, ದ್ವೇಷ ಮತ್ತು ಅಸೂಯೆ ತೊರೆದು ಎಲ್ಲರನ್ನು ಸಾಮರಸ್ಯದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಹಿಂದೂ ಧರ್ಮದೊಂದಿಗೆ ಭಾರತ ಭೂಮಿಯಲ್ಲಿ ಜನಿಸಿರುವುದು ನಮ್ಮ ಭಾಗ್ಯ ಎಂದು ಹೇಳಿದರು.ಯಡೇಹಳ್ಳಿ ಆರ್‌. ಮಂಜುನಾಥ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ಅನುಕರಣೆಯಿಂದ ನಮ್ಮ ಪರಂಪರೆ ಹದಗೆಡುತ್ತಿದೆ. ತಾಯಂದಿರು ಮಕ್ಕಳಿಗೆ ಚಿಕ್ಕಂದಿನಿಂದಲೇ ಧಾರ್ಮಿಕ ಮೌಲ್ಯಗಳು ಹಾಗೂ ಸದ್ವಿಚಾರಗಳನ್ನು ಕಲಿಸಿಕೊಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಯರಾಜ್, ನಾಗೇಶ್, ಬಿ.ಎಂ. ಶಿವಕುಮಾರ್‌, ವಕೀಲ ಛಲವಾದಿ ಡಿ. ಕರಿಯಣ್ಣ, ಹಿಂದೂ ಹಿತ ರಕ್ಷಣಾ ಸಂಘಟನೆಯ ಮುಖಂಡ ರಘು, ರಾಜಶೇಖರ್‌, ಚಂದ್ರಣ್ಣ, ಪುಟ್ಟಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.