ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಚೆಂಡು ಹೂವಿಗೆ ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಕುಸಿತದಿಂದಾಗಿ ರೈತರು ಬೆಳೆದ ಹೂ ಬೆಳೆಗೆ ಹಾಕಿದ ಮೂಲ ಬಂಡವಾಳವೂ ಬಾರದಂತಾಗಿ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಬೇಸತ್ತ ರೈತರು ರಸ್ತೆಯ ಬದಿಯಲ್ಲಿ ಹೂವುಗಳನ್ನು ಸುರಿಯುತ್ತಿದ್ದಾರೆ. ಸಾಲು ಸಾಲು ಹಬ್ಬಗಳ ನಂತರ ಮಾರುಕಟ್ಟೆಯಲ್ಲಿ ಚೆಂಡು ಹೂವಿನ ಬೆಲೆ ಕುಸಿತವಾಗಿಗೆ. ರೈತರು ಹೂವುಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ತಗುಲುವ ವೆಚ್ಚ ಮತ್ತು ಕೂಲಿ ಹಣ ಬರುತ್ತಿಲ್ಲ. ಇತ್ತೀಚೆಗೆ ನಡೆದ ದಸರೆ ಹಬ್ಬದ ವೇಳೆ ಕೆಜಿಗೆ 200ರಿಂದ 250 ರುಗಳಿಗೆ ಮಾರಾಟವಾಗಿದ್ದ ಚೆಂಡು ಹೂ ದರ ಈಗ ಕೆಜಿಗೆ 5ರಿಂದ 6ರು.ಗಳಿಗೆ ಮಾರಾಟವಾಗುತ್ತಿರುವುದು ರೈತರಿಗೆ ಆಘಾತ ತಂದಿದೆ.ಕಟಾವನ್ನೇ ಕೈಬಿಟ್ಟ ರೈತರು
ದರ ಕುಸಿತದಿಂದ ದಿಕ್ಕುತೋಚದೆ ಅನೇಕ ರೈತರು ತೋಟದಲ್ಲೇ ಹೂವುಗಳನ್ನು ಬಿಟ್ಟು ಬಿಡುವ ಅಥವಾ ಕಿತ್ತು ಬಿಸಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂವು ಬಂದಿರುವುದರಿಂದ, ಹೂವಿಗೆ ಸರಿಯಾದ ಬೆಲೆ ಸಿಗದೆ, ಹಾಕಿದ ಬಂಡವಾಳವೂ ನಷ್ಟವಾಗುತ್ತಿದೆ ಎಂದು ರೈತರು ಸಂಕಟ ವ್ಯಕ್ತಪಡಿಸುತ್ತಿದ್ದಾರೆ.ಹಬ್ಬಗಳು ಮುಗಿದ ನಂತರ ಹೂವಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಹೂವುಗಳನ್ನು ಬೆಳೆದಿರುವ ರೈತರು ಬೆಲೆ ಕುಸಿತದಿಂದ ಬೇಸತ್ತು ಕೋಲಾರ ಬಂಗಾರಪೇಟೆ ಮಾರ್ಗದಲ್ಲಿ ರೈತರೊಬ್ಬರು ಚೆಂಡು ಹೂವುಗಳನ್ನು ಚೆಲ್ಲಿದ್ದು, ಸಾರ್ವಜನಿಕರು ಮುಗಿಬಿದ್ದು ಕೊಂಡೊಯ್ದರು. ದಸರಾ ಹಬ್ಬಕ್ಕೆ ಉತ್ತಮ ಬೆಲೆಗೆ ಮಾರಾಟವಾದ ಹೂಗಳಿಗೆ ಈಗ ಬೇಡಿಕೆ ಮತ್ತು ಬೆಲೆ ಇಲ್ಲದೆ ಬೆಳೆಗೆ ಹಾಕಿದ ಬಂಡವಾಳ ತೆಗೆಯಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ನಿರೀಕ್ಷೆ ಮಟ್ಟದಲ್ಲಿ ಹೂಗಳು ಮಾರಾಟವಾಗುತ್ತಿಲ್ಲ. ಇದರಿಂದ ಬೇಸತ್ತ ರೈತರು ರಸ್ತೆಬದಿ ಸುರಿಯುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಆವಕ ಹೆಚ್ಚಳಹೆಚ್ಚಿನ ಪ್ರಮಾಣದಲ್ಲಿ ಹೂವು ಕಟಾವಿಗೆ ಬಂದು ಬೇಡಿಕೆಗಿಂತ ಅವಕ ಹೆಚ್ಚಾಗಿದೆ ಇದರಿಂದ ಬಾರಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ತಾಲ್ಲೂಕಿನ ರೈತರೊಬ್ಬರು ಕೋಲಾರದ ಮಾರುಕಟ್ಟೆಗೆ ಹಾಕಿದ್ದ ಹೂವು ಮಾರಾಟವಾಗದೆ ಇದ್ದ ಕಾರಣ ಬೇಸರಗೊಂಡು ಬಂಗಾರಪೇಟೆ ಮತ್ತು ಕೋಲಾರದ ಮುಖ್ಯ ರಸ್ತೆಯ ಬದಿಯಲ್ಲಿ ಸುರಿಯುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆ ಬದಿ ರಾಶಿಗಟ್ಟಲೇ ಇದ್ದ ಹೂವನ್ನು ಸಾರ್ವಜನಿಕರು ಗೋಣಿ ಚೀಲಗಳಲ್ಲಿ ತುಂಬಿಕೊಂಡು ಹೋದ ದೃಶ್ಯಗಳೂ ಕಂಡು ಬಂದವು.ಹೊರ ರಾಜ್ಯಗಳಲ್ಲ ಬೇಡಿಕೆ ಇಲ್ಲ
ಪ್ರತಿ ವರ್ಷ ತಾಲೂಕಿನ ಚೆಂಡು ಹೂವಿಗೆ ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು ಮತ್ತು ಕೇರಳದಲ್ಲಿ ಬೇಡಿಕೆ ಇತ್ತು, ಅಲ್ಲಿನ ವ್ಯಾಪಾರಸ್ಥರು ಬಂದು ಹೂವುಗಳನ್ನು ಖರೀದಿ ಮಾಡುತ್ತಿದ್ದರು. ಈ ವರ್ಷ ದಿಢೀರನೆ ಹೊರ ರಾಜ್ಯಗಳಲ್ಲಿ ಬೇಡಿಕೆ ಕುಸಿದಿರುವುದರಿಂದ ಅಲ್ಲಿನ ವ್ಯಾಪಾರಸ್ಥರು ಇತ್ತ ಮುಖ ಮಾಡಿಲ್ಲ. ಇದರಿಂದ ಸ್ಥಳಿಯ ಮಾರುಕಟ್ಟೆಗಳಲ್ಲಿ ಡಿಮ್ಯಾಂಡು ಇಲ್ಲದ ಕಾರಣ ಲಕ್ಷಾಂತರ ರು.ಗಳ ನಷ್ಟ ಅನುಭವಿಸುವಂತಾಗಿದೆ.ಮುಂದಿನ ವಾರ ದೀಪಾವಳಿ ಹಬ್ಬ ಬರಲಿದೆ. ಆ ಸಂದರ್ಭದಲ್ಲಿಯಾದರೂ ಚಂಡು ಹೂವಿಗೆ ಬೇಡಿಕೆ ಮತ್ತು ಉತ್ತಮ ದರ ದೊರೆಯಬಹುದು ಎಂದು ಬೆಳೆಗಾರರು ಆಸೆ ಕಣ್ಗಗಳಿಂದ ನಿರೀಕ್ಷಿಸುತ್ತಿದ್ದಾರೆ.