ಸಾರಾಂಶ
ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ವೃತ್ತಿ ರಂಗಭೂಮಿ ತವರೂರಾಗಿದ್ದು, ಈ ಊರು ರಂಗಭೂಮಿಯ ಅನುಭವ ಮಂಟಪವಾಗಿದೆ. ಇಲ್ಲಿ ಎಲ್ಲಾ ಜಾತಿ- ಧರ್ಮದವರು ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ದಾವಣಗೆರೆ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ಇಲ್ಲಿನ ದುರ್ಗಾದಾಸ್ ಕಲಾಮಂದಿರದಲ್ಲಿ ಭಾನುವಾರ ರಾತ್ರಿ ನಡೆದ ಡಾ. ಕೆ. ನಾಗರತ್ನಮ್ಮ ಅಭಿನಂದನಾ ಸಮಿತಿ, ರಂಗಸಿರಿ ಕಲಾ ಟ್ರಸ್ಟ್ ಹಾಗೂ ಮಾರುತಿ ಕಲಾರಂಗ ಸಂಯುಕ್ತಾಶ್ರಯದಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ. ನಾಗರತ್ನಮ್ಮ ಅವರ ಅಭಿನಂದನಾ ಗ್ರಂಥ ರಂಗಸಿರಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮರಿಯಮ್ಮನಹಳ್ಳಿ ದುರ್ಗಾದಾಸ್ ಮತ್ತು ಎಲೆವಾಳ ಸಿದ್ದಯ್ಯನಂತಹ ಮೇರು ನಟರಾಗಿದ್ದು, ಇವರಿಗಾಗಿಯೇ ಕಂದಕಲ್ ಹನುಮಂತರಾಯರು ಚಿತ್ರಾಂಗದ ನಾಟಕದಲ್ಲಿ ದುರ್ಗಾದಾಸ್‌ರಿಗಾಗಿ ಅರ್ಜುನನ ಪಾತ್ರಕ್ಕಾಗಿಯೇ ನಾಟಕ ಬರೆದಿದ್ದಾರೆ ಎಂದರೆ ಸಾಮಾನ್ಯ ಮಾತಲ್ಲ. ಇಂತಹ ವಾತಾವರಣ ಅಧುನಿಕ ರಂಗಭೂಮಿಯಲ್ಲಿ ಕಾಣಲು ಸಾಧ್ಯವಿಲ್ಲ. ಒಬ್ಬ ನಟ- ನಟಿಗಾಗಿ ನಾಟಕ ಬರೆಯುವುದು ಸಾಮಾನ್ಯ ಮಾತಲ್ಲ ಅಂತಹ ಅದ್ಭುತ ಶಕ್ತಿಯನ್ನು ಇಲ್ಲಿನ ಕಲಾವಿದರು ಹೊಂದಿದ್ದಾರೆ ಎಂದು ಅವರು ಹೇಳಿದರು.ಹಂಪಿ ಕನ್ನಡ ವಿವಿ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಅಭಿನಂದನಾ ಗ್ರಂಥ ಕುರಿತು ಮಾತನಾಡಿ, ದೇವಾಲಯಗಳಿಗೆ ಇರುವಷ್ಟು ಪ್ರಾಚೀನ ಇತಿಹಾಸ ರಂಗಭೂಮಿಗೂ ಇದೆ. ರಂಗಪರಂಪರೆಗೆ ಬಹು ದೊಡ್ಡ ಇತಿಹಾಸವಿದೆ. ಕನ್ನಡದಲ್ಲಿ ಮಹಿಳೆಯವರ ರಂಗಭೂಮಿ ಕಲಾವಿದೆಯರ ಆತ್ಮಕಥೆಗಳು ಬಹಳ ಬಂದಿಲ್ಲ.ಜೀವನ ಚರಿತ್ರೆಗಳು ಬಂದಿಲ್ಲ. ಅಭಿನಂದನಾ ಗ್ರಂಥಗಳಂತೂ ಬಹಳ ಕಡಿಮೆ ಬಂದಿದ್ದಾವೆ. ಡಾ. ಕೆ. ನಾಗರತ್ನಮ್ಮ ಅವರ ಕುರಿತು ಅಭಿನಂದನಾ ಗ್ರಂಥ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಸಭೆಯಲ್ಲಿ ಮಾತನಾಡಿದರು.ಬೆಂಗಳೂರಿನ ಹೈಕೋರ್ಟ್ ವಕೀಲ ಅನಂತ ನಾಯ್ಕ ಎನ್., ಮುಂಬೈನ ಸಾಹಿತಿ ಗೋಪಾಲ್ ತ್ರಾಸಿ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್. ಜಂಬಯ್ಯನಾಯಕ ಸಭೆಯಲ್ಲಿ ಮಾತನಾಡಿದರು. ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕುರಿ ಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಸಭೆಯಲ್ಲಿ ಮಾತನಾಡಿದರು.
ಸಂಡೂರಿನ ಪ್ರಭುಸ್ವಾಮೀಜಿ, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ದಿವ್ಯ ಸಾನಿಧ್ಯ ವಹಿಸಿದ್ದರು.ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ.ನಾಗರತ್ನಮ್ಮ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮಜೋಗತಿ, ನಾಡೋಜ ಪ್ರಶಸ್ತಿ ಪುರಸ್ಕೃತ ವಿ.ಟಿ. ಕಾಳೆ, ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಭಾಷ, ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಕಲಾವಿದೆ ಎಸ್. ರೇಣುಕಾ, ಸಿಪಿಐ ಸರಳ ಪಿ, ಸ್ಥಳೀಯ ಮುಖಂಡರಾದ ಗೋವಿಂದರ ಪರುಶುರಾಮ, ಎಚ್. ಮಂಜುನಾಥ, ಗರಗ ಪ್ರಕಾಶ್, ರೋಗಾಣಿ ಮಂಜುನಾಥ, ಡಿ. ರಾಘವೇಂದ್ರ ಶೆಟ್ಟಿ, ಟಿ. ಬಸವರಾಜ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನಾ ತಳವಾರ್ ಪ್ರಾರ್ಥಿಸಿದರು. ಎಸ್. ನವೀನ್ ಸ್ವಾಗತಿಸಿದರು. ಡಿ.ರಾಘವೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಪಂಕಜ ಬಸವರಾಜ ವಂದಿಸಿದರು. ಬಿ.ಪರುಶುರಾಮ ನಿರೂಪಿಸಿದರು.ನಂತರ ಕೆ.ಪಂಕಜ ಬಸವರಾಜ ಮತ್ತು ತಂಡದವರಿಂದ ರಂಗಗೀತೆಗಳ ಗಾಯನ ನಡೆಯಿತು. ರಾತ್ರಿ ಬೆಂಗಳೂರಿನ ತಂಡದಿಂದ ಕಿಂದರಜೋಗಿ ನಾಟಕ ಪ್ರದರ್ಶನ ನಡೆಯಿತು.