ಭಕ್ತಸಾಗರದ ಮಧ್ಯೆ ಮರಿಯಮ್ಮನಹಳ್ಳಿ ನೂತನ ಜೋಡಿ ರಥೋತ್ಸವ ಸಂಪನ್ನ

| Published : Apr 07 2025, 12:31 AM IST

ಭಕ್ತಸಾಗರದ ಮಧ್ಯೆ ಮರಿಯಮ್ಮನಹಳ್ಳಿ ನೂತನ ಜೋಡಿ ರಥೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿಯ ಅಪರೂಪದ ನೂತನ ಜೋಡಿ ರಥೋತ್ಸವ ಭಾನುವಾರ ಸಂಜೆ ಮರಿಯಮ್ಮನಹಳ್ಳಿಯಲ್ಲಿ ಅಪಾರ ಭಕ್ತ ಸಾಗರದ ನಡುವೆ ಸಾಂಪ್ರದಾಯಿಕವಾಗಿ, ಸಡಗರ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆಯಿತು.

ಮರಿಯಮ್ಮನಹಳ್ಳಿ: ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿಯ ಅಪರೂಪದ ನೂತನ ಜೋಡಿ ರಥೋತ್ಸವ ಭಾನುವಾರ ಸಂಜೆ ಮರಿಯಮ್ಮನಹಳ್ಳಿಯಲ್ಲಿ ಅಪಾರ ಭಕ್ತ ಸಾಗರದ ನಡುವೆ ಸಾಂಪ್ರದಾಯಿಕವಾಗಿ, ಸಡಗರ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆಯಿತು.

ರಥೋತ್ಸವದ ಅಂಗವಾಗಿ ಬೆಳಗ್ಗೆ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿಯ ದೇವರ ವಿಗ್ರಹಗಳಿಗೆ ಬಂಗಾರ ಮತ್ತು ಬೆಳ್ಳಿಯ ಆಭರಣಗಳಿಂದ ಮತ್ತು ವಿವಿಧ ಹೂವಿಗಳಿಂದ ಅಲಂಕಾರಗಳನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ವರ್ಷ ದೇವಸ್ಥಾನ ನವೀಕರಣಗೊಂಡಿದ್ದರಿಂದ ದೇವಸ್ಥಾನಕ್ಕೆ ಬಂದ ಭಕ್ತರೆಲ್ಲ ದೇವಸ್ಥಾನವನ್ನು ವೀಕ್ಷಿಸಿ, ದೇವರ ದರ್ಶನ ಪಡೆದುಕೊಂಡು ಧನ್ಯತೆ ಪಡೆದುಕೊಂಡರು. ದೇವಸ್ಥಾನದ ಸುತ್ತಲೂ ವಿಶೇಷವಾಗಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಮುಂದೆ ಹೂವಿನ ತೋರಣದಲ್ಲಿ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಎಂದು ಹೂವುಗಳಲ್ಲಿ ಬರೆಯಲಾಗಿತ್ತು.

ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ತಮ್ಮ ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆದುಕೊಳ್ಳಲು ಸಾಲುಗಟ್ಟಿನಿಂತಿದ್ದರು.

ಮಧ್ಯಾಹ್ನ ನೂತನ ಜೋಡಿ ರಥಗಳ ಮಡಿ ತೇರನ್ನು ಎಳೆಯಲು, ದೇವಸ್ಥಾನದಿಂದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಉತ್ಸವ ಮೂರ್ತಿಗಳನ್ನು ಬ್ರಾಹ್ಮಣರು ಮತ್ತು ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಉತ್ಸವ ಮೂರ್ತಿಯನ್ನು ವೈಶ್ಯರು (ಶೆಟ್ಟರು) ತೆಗೆದುಕೊಂಡು ಬಂದು, ನೂತನ ರಥಗಳಲ್ಲಿ ಪ್ರತಿಷ್ಠಾಪಿಸಿದರು. ನಂತರ ನೂತನ ಜೋಡಿ ರಥಗಳನ್ನು ಒಂದು ಕಡೆ ಬ್ರಾಹ್ಮಣರು ಮತ್ತು ಮತ್ತೊಂದು ಕಡೆ ವೈಶ್ಯರು (ಶೆಟ್ಟರು) ಸನ್ನೆ ಹಾಕಿ, ಹಗ್ಗ ಹಿಡಿದು ಎಳೆದರು.

ರಥೋತ್ಸವದ ಗಾಲಿಗಳು ಮುಂದಕ್ಕೆ ಸಾಗುತ್ತಿದ್ದಂತೆ ಸೇರಿದ್ದ ಲಕ್ಷಾಂತರ ಭಕ್ತರು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ರಥಕ್ಕೆ ಹೂವು, ಬಾಳೆಹಣ್ಣ, ಉತ್ತುತ್ತಿ, ದವನದ ಪತ್ರೆಎಸೆದರು.

ನೂತನ ಜೋಡಿ ರಥಗಳು ಸಾಗಿ ಮತ್ತೆ ಸ್ವಸ್ಥಾನಕ್ಕೆ ಮರಳಿತು.

ರಥದ ಹಗ್ಗ ಹಿಡಿದು ಎಳೆಯುವ ಭಕ್ತರು ಶ್ರೀ ಲಕ್ಷ್ಮೀರಮಣ ಗೋವಿಂದಾ.... ಗೋವಿಂದಾ.... ಎಂದು ಕೂಗಿದರು. ಹಗ್ಗ ಹಿಡಿದು ಎಳೆಯಲು ಭಕ್ತರು ಪೈಪೋಟಿ ನಡೆಸಿದರು. ಈ ನಡುವೆ ಊರಿನ ಪೈಲ್ವಾನರು ಸನ್ನೆ ಹಾಕಿ ರಥಕ್ಕೆ ಮುಂದಕ್ಕೆ ಚಲಿಸಲು ಸಹಕರಿಸಿದರು.

ನಂದಿಕೋಲು, ಕಹಳೆ, ಹಲಗೆ, ಜಾಗಟೆ, ಗಂಟೆ, ಶಂಖನಾದ ಮತ್ತಿತರ ವಾದ್ಯಗಳು ಮೊಳಗಿದವು.

ಶ್ರೀ ಲಕ್ಷ್ಮೀನಾರಾಯಣಸ್ವಾಮಿ ರಥದ ಪಟದ ಹರಾಜನ್ನು ₹8 ಲಕ್ಷಗಳಿಗೆ ಮಿಲ್ಟ್ರಿ ಮಂಜುನಾಥ ಪಡೆದರು. ಶ್ರೀ ಆಂಜನೇಯಸ್ವಾಮಿ ರಥದ ಪಟದ ಹರಾಜನ್ನು ಕಾಸ್ಲಿ ಬಾಲರಾಜು ₹12.10 ಲಕ್ಷಕ್ಕೆ ಪಡೆದರು.