ಸುಸಜ್ಜಿತ, ವ್ಯವಸ್ಥಿತ ವ್ಯಾಪಾರ ವಲಯ ನಿರ್ಮಾಣಕ್ಕೆ ಸ್ಥಳ ಗುರುತು: ಕೃಷ್ಣಪ್ರಸಾದ್

| Published : Nov 11 2024, 12:52 AM IST

ಸುಸಜ್ಜಿತ, ವ್ಯವಸ್ಥಿತ ವ್ಯಾಪಾರ ವಲಯ ನಿರ್ಮಾಣಕ್ಕೆ ಸ್ಥಳ ಗುರುತು: ಕೃಷ್ಣಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ವತಿಯಿಂದ ಪಟ್ಟಣ ಮಾರಾಟ ಸಮಿತಿ ಸಭೆ ಆಯೋಜಿಸಲಾಗಿತ್ತು. ಮುಖ್ಯಾಧಿಕಾರಿ ಕೃಷ್ಣಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಿತ ವ್ಯಾಪಾರ ವಲಯ ನಿರ್ಮಾಣ ಮಾಡಲು ಮೂರು ಕಡೆ ಸ್ಥಳ ಗುರುತು ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪಟ್ಟಣದ ಪುರಸಭೆ ವತಿಯಿಂದ 30 ಲಕ್ಷ ರು. ವೆಚ್ಚದಲ್ಲಿ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ಹಾಗೂ ವ್ಯವಸ್ಥಿತವಾದ ವ್ಯಾಪಾರ ವಲಯ ನಿರ್ಮಾಣ ಮಾಡಲು ಮೂರು ಕಡೆ ಸ್ಥಳ ಗುರುತು ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೇಳಿದರು.

ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಹಾಗೂ ಪುರಸಭೆ ವತಿಯಿಂದ ಪಟ್ಟಣ ಮಾರಾಟ ಸಮಿತಿ ಸಭೆ ಆಯೋಜಿಸಲಾಗಿತ್ತು.

ಮಾರಾಟ ಸಮಿತಿ ಅಧ್ಯಕ್ಷರು ಆಗಿರುವ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಪಟ್ಟಣದ ನ್ಯಾಯಾಲಯ ಬಳಿ, ಖಾಸಗಿ ಬಸ್ ನಿಲ್ದಾಣ, ಹಾಗೂ ಅರಣ್ಯ ಡಿಫೋದ ಬಳಿ ವ್ಯಾಪಾರ ವಲಯ ಗುರುತಿಸಲಾಗಿದೆ.

ಈ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಿ ಸರ್ಕಾರಕ್ಕೆ ವರದಿ ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ಪಟ್ಟಣದಲ್ಲಿ 122 ಮಂದಿ ಬೀದಿಬದಿ ವ್ಯಾಪಾರಿಗಳು ಇದ್ದಾರೆ. ಬೀದಿ ಬದಿ ವ್ಯಾಪಾರವನ್ನು ಜೀವನೋಪಾಯಕ್ಕಾಗಿ ಕಂಡುಕೊಂಡಿದ್ದಾರೆ. ಇದು ಪ್ರತಿ ವ್ಯಾಪಾರಿಗಳ ಜೀವನ ನಿರ್ವಹಣೆಯ ಮೂಲವಾಗಿದೆ. ಆದ್ದರಿಂದ ಈ ವ್ಯಾಪಾರಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.

ಸಮುದಾಯ ಸಂಘಟನಾಧಿಕಾರಿ ಪೂರ್ಣಕಲಾ ಮಾತನಾಡಿ, ಪುರಸಭೆ ವತಿಯಿಂದ 392 ಮಂದಿಗೆ ಸಾಲ ಸೌಲಭ್ಯ ವಿತರಿಸಲಾಗಿದೆ. ಪ್ರಥಮ ಹಂತದಲ್ಲಿ 10 ಸಾವಿರ ರು. ಹಾಗೂ ಎರಡನೇ ಹಂತದಲ್ಲಿ 20 ಸಾವಿರ ರು., ನಂತರ 50 ಸಾವಿರ ರು. ಸಾಲ ಸೌಲಭ್ಯ ವಿತರಿಸಲಾಗುತ್ತದೆ. ಈ ಸೌಲಭ್ಯವನ್ನು ವ್ಯಾಪಾರಸ್ಥರು ಸದುಪಯೋಗ ಮಾಡಿಕೊಂಡು ತಮ್ಮ ಜೀವನಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಲವು ಬ್ಯಾಂಕ್ ಅಧಿಕಾರಿಗಳು ವ್ಯಾಪಾರಿಗಳಿಗೆ ಅಸಹಕಾರ ಧೋರಣೆ ತಾಳುತ್ತಿರುವ ಬಗ್ಗೆ ಸಭೆಯಲ್ಲಿ ದೂರುಗಳು ಕೇಳಿ ಬಂದವು.

ಈ ಸಂದರ್ಭ ಸಂಚಾರಿ ಪೊಲೀಸ್ ಸಹಾಯಕ ನಿರೀಕ್ಷಕ ಬಿ.ಕೆ.ಹರೀಶ್, ಪುರಸಭೆ ಕಂದಾಯ ನಿರೀಕ್ಷಕ ಸೋಮಶೇಖರ್, ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್, ಸಮುದಾಯ ಸಂಘಟನಾಧಿಕಾರಿ ಪೂರ್ಣಕಲಾ, ಸಿಬ್ಬಂದಿ ದಾಕ್ಷಾಯಿಣಿ, ಶೃತಿ, ವಿವಿಧ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ, ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಆದಂ, ಸಲೀನಾ ಡಿ.ಕುನ್ನಾ, ಮಹೇಶ್ , ಗಣೇಶ ಮತ್ತಿತರರು ಇದ್ದರು.