ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಮಾರ್ಕಂಡೇಯ ಜಲಾನಯನ ಪ್ರದೇಶದಲ್ಲಿ ಸತತ ಧಾರಾಕರವಾಗಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದ್ದು, ಮಾರ್ಕಂಡೇಯ ಜಲಾಶಯ ಶೇ.98.10ರಷ್ಟು ಭರ್ತಿಯಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬಿಡಕರ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಕಂಡೇಯ ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಜಲಾಶಯದ ಗರಿಷ್ಠ ಮಟ್ಟ 2309.71 ಅಡಿಗಳಿದ್ದು, ಜುಲೈ 17ರಂದು ಬೆಳಗ್ಗೆ 11.30 ಗಂಟೆಗೆ 2308.98 ಅಡಿಗಳಿಗೆ ತಲುಪಿದೆ. ಜಲಾಶಯಕ್ಕೆ 2441 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಮಾರ್ಕಂಡೇಯ ನದಿಗೆ ಜು.17ರಂದು ಮಧ್ಯಾಹ್ನ 3 ಗಂಟೆಗೆ ಗೇಟುಗಳ ಮೂಲಕ 2500 ಕ್ಯುಸೆಕ್ ನೀರನ್ನು ನದಿಪಾತ್ರಕ್ಕೆ ಬಿಡಲಾಗುತ್ತಿದೆ. ಜಲಾಶಯ ಒಳಹರಿವು ಹೆಚ್ಚಾದಂತೆ ಮತ್ತೆ 5 ಸಾವಿರ ಕ್ಯುಸೆಕ್ ವರೆಗೆ ನೀರನ್ನು ನದಿಪಾತ್ರಕ್ಕೆ ಬಿಡಲಾಗುವುದು. ಮಾರ್ಕಂಡೇಯ ನದಿತೀರದಲ್ಲಿ ಬರುವ ಎಲ್ಲ ಗ್ರಾಮಸ್ಥರು ಜಾನುವಾರುಗಳ ಸಮೇತ ನದಿ ಪಾತ್ರದಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಕರ್ನಾಟಕ ನೀರಾವರಿ ನಿಗಮ ಹಿರಿಯ ಅಧಿಕಾರಿಗಳು, ನೀರಾವರಿ ನಿಗಮದ ಜಿಎಲ್ಬಿಸಿ ಉಪವಿಭಾಗ 1 ಹಿಡಕಲ್ ಡ್ಯಾಂ, ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳು, ಆಲಮಟ್ಟಿ ಜಲಾಶಯದ ಮುಖ್ಯ ಅಭಿಯಂತರ, ಬಾಗಲಕೋಟೆ ಪೊಲೀಸ್ ಅಧೀಕ್ಷಕರು, ಬೆಳಗಾವಿ ಪ್ರಾದೇಶಿಕ ಆಯುಕ್ತರು, ಗೋಕಾಕ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು, ನಾರಾಯಣಪುರ ಜಲಾಶಯದ ಅಧೀಕ್ಷಕ ಅಭಿಯಂತರರು, ಆಲಮಟ್ಟಿ, ಜಿ.ಎಲ್.ಬಿ.ಸಿ ವೃತ್ತ ಜಮಖಂಡಿ ಹಾಗೂ ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆಯ ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರರು, ಬೆಳಗಾವಿ ಉಪ ವಿಭಾಗಾಧಿಕಾರಿಗಳು, ಜಮಖಂಡಿ, ಬೈಲಹೊಂಗಲ, ತಹಸೀಲ್ದಾರರು ಹುಕ್ಕೇರಿ, ಗೋಕಾಕ, ಮುಧೋಳ ಮತ್ತು ಬಾಗಲಕೋಟೆ, ಧಾರವಾಡ ಆಕಾಶವಾಣಿ ಕೇಂದ್ರದ ನಿರ್ದೇಶಕರು, ಗೋಕಾಕ ಪೊಲೀಸ್ ನಿರೀಕ್ಷಕರು, ಮುಧೋಳ, ಬಾಗಲಕೋಟೆ, ಸಂಕೇಶ್ವರ, ಯಮಕನಮರಡಿ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿ ಬೆಳಗಾವಿ ಇಲಾಖೆಗಳಿಗೆ ಪ್ರವಾಹ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಲಿಖಿತ ನೋಟಿಸ ನೀಡಿದ್ದಾರೆ ಎಂದು ತಿಳಿಸಿದರು.