ಸಾರಾಂಶ
ಮಕ್ಕಳ ಸಂತೆಯಂತಹ ಕಾರ್ಯಕ್ರಮಗಳು ವೃತ್ತಿ ಗೌರವ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಆಪಟ್ಟೀರ ಟಾಟು ಮೊಣ್ಣಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಕ್ಕಳ ಸಂತೆಯಂತಹ ಕಾರ್ಯಕ್ರಮಗಳು ವೃತ್ತಿ ಗೌರವವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಮಾಯಮುಡಿ ಗ್ರಾ.ಪಂ. ಅಧ್ಯಕ್ಷ ಆಪಟ್ಟೀರ ಟಾಟು ಮೊಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಅಗತ್ಯತೆಯನ್ನು ವಿವರಿಸಿದರು.
ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸುತ್ತದೆ, ಅಲ್ಲದೆ ವೃತ್ತಿಯ ಕುರಿತು ಅರಿವು ಮೂಡಿಸುತ್ತದೆ. ಸರ್ಕಾರಿ ಶಾಲೆಗಳ ಹಲವು ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ, ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಇಂದು ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡ ರೀತಿ ಮತ್ತು ಆಸಕ್ತಿ ಶ್ಲಾಘನೀಯವೆಂದರು.ಮುಖ್ಯ ಶಿಕ್ಷಕಿ ಹೆಚ್.ಸಿ.ಜಯಮ್ಮ, ಶಿಕ್ಷಕರಾದ ರಾಗಿಣಿ, ಸತ್ಯ, ಲೀಲಾ, ಸುಮ, ಪುಷ್ಪ, ಸಹನಾ, ಲಾಯ್ಡ್, ಪೌಢ ಶಾಲೆಯ ಮುಖ್ಯ ಶಿಕ್ಷಕಿ ವಾಣಿ ಹಾಗೂ ಪೋಷಕರು ಉಪಸ್ಥಿತರಿದ್ದರು.
ಮನೆಯಲ್ಲಿಯೇ ಬೆಳೆದ ತಾಜಾ ತರಕಾರಿ, ಹಣ್ಣು, ಸೊಪ್ಪು ಮತ್ತು ರುಚಿ ರುಚಿಯಾದ ಖಾದ್ಯಗಳನ್ನು ಮಾರಾಟಕ್ಕಿಟ್ಟು ಗ್ರಾಮೀಣ ಸೊಗಡಿನ ಶೈಲಿಯಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು. ಗ್ರಾ.ಪಂ ಪ್ರತಿನಿಧಿಗಳು, ಪೋಷಕರು, ಶಿಕ್ಷಕರು ಮತ್ತಿತರರು ಮಾರಾಟಕ್ಕಿಟ್ಟ ವಸ್ತುಗಳನ್ನು ಖರೀದಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.