ವಾಹನಗಳಿಗೆ ಹಾಕುವ ಹೂವಿನ ಹಾರಗಳ ಬೆಲೆ ದುಪ್ಪಟ್ಟು ಏರಿಕೆಯಾಗಿತ್ತು. ಸಾಮಾನ್ಯ ದಿನಗಳಲ್ಲಿ ₹100 ಇದ್ದ ಹೂವಿನ ಹಾರಗಳು ಹಬ್ಬದ ಪ್ರಯುಕ್ತ ₹200 ರಿಂದ ₹250, ದೊಡ್ಡ ಗುಲಾಬಿ ಹೂವಿನ ಹಾರಗಳು ₹300ರಿಂದ ₹500 ವರೆಗೆ ಮಾರಾಟವಾಗುತ್ತಿದ್ದವು. ಆಯುಧ ಪೂಜೆಗೆ ಅಂಗಡಿ, ವಾಹನಗಳಿಗೆಲ್ಲಾ ಹೂವು ಹಾಗೂ ನಿಂಬೆ ಹಣ್ಣಿಗೆ ಅವಶ್ಯಕತೆ ಇರುವುದರಿಂದ ಇವರೆಡಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತ್ತು. ಅದಕ್ಕೆ ತಕ್ಕಂತೆ ವ್ಯಾಪಾರಸ್ಥರೂ ಬೆಲೆಯಲ್ಲಿ ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದು ಕಂಡುಬಂದಿತು. ಜನತೆ ಒಂದಷ್ಟು ಚೌಕಾಸಿ ಮಾಡಿ ಸಾಮಗ್ರಿಗಳನ್ನು ಕೊಳ್ಳುವುದರಲ್ಲಿ ಮಗ್ನರಾಗಿದ್ದರು.

ಕನ್ನಡಪ್ರಭ ವಾರ್ತೆ ರಾಮನಗರ

ಬರಗಾಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಜಿಲ್ಲೆಯಲ್ಲಿ ಆಯುಧ ಪೂಜೆ ಹಬ್ಬಕ್ಕೆ ಸಡಗರ, ಸಂಭ್ರಮದ ಸಿದ್ಧತೆ ನಡೆದಿದೆ.

ಅಂಗಡಿಗಳು, ವಾಹನಗಳನ್ನು ಸ್ವಚ್ಛಗೊಳಿಸಿಕೊಂಡಿರುವ ಸಾರ್ವಜನಿಕರು ಪೂಜಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ರಂಗೇರಿದ ವಾತಾವರಣ ಸೃಷ್ಟಿಯಾಗಿತ್ತು.

ಆಯುಧ ಪೂಜೆ ಮಂಗಳವಾರ (ಅ.20) ಇರುವ ಹಿನ್ನೆಲೆ ಸೋಮವಾರದಿಂದಲೇ ಅಂಗಡಿಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ವಾಹನಗಳನ್ನು ತೊಳೆದು ಪೂಜೆಗೆ ಸಿದ್ಧಗೊಳಿಸುವ ಕಾರ್ಯವನ್ನು ಜೊತೆಯಲ್ಲೇ ನಡೆಸುತ್ತಿದ್ದುದು ಕಂಡುಬಂದಿತು.

ಬರಗಾಲದ ಹಿನ್ನೆಲೆ ಈ ಬಾರಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಹೀಗಾಗಿ ಪೂಜೆಗೆ ಬೇಕಾದ ಬೂದುಗುಂಬಳಕಾಯಿ, ನಿಂಬೆಹಣ್ಣು, ಹೂವು, ವೀಳ್ಯದಲೆ ಸೇರಿದಂತೆ ಬಹುತೇಕ ಸಾಮಗ್ರಿಗಳ ದರ ಗಗನಕ್ಕೇರಿವೆ.

ಗ್ರಾಮಾಂತರ ಪ್ರದೇಶಗಳಿಂದ ಜನರು ಕೂಡ ಆಯುಧಪೂಜೆಗೆ ಅಗತ್ಯವಿರುವ ವಸ್ತುಗಳ ಖರೀದಿಗೆ ನಗರಕ್ಕೆ ಆಗಮಿಸಿದ್ದರು. ನಗರದ ಎಪಿಎಂಸಿ ಮಾರುಕಟ್ಟೆ, ಎಂ.ಜಿ.ರಸ್ತೆ, ಹಳೇ ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬೂದುಗುಂಬಳ, ಹೂವು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆಹಣ್ಣುಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರದಲ್ಲಿ ನಿರತರಾಗಿದ್ದರು.

ಆಯುಧ ಪೂಜೆ ಆಚರಣೆಗೆ ಅಗತ್ಯವಾಗಿ ಬೇಕಾದ ಬೂದುಕುಂಬಳ ಕಾಯಿ ಬೆಲೆ ಜಿಲ್ಲಾ ಕೇಂದ್ರದಲ್ಲಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹30 ರಿಂದ ₹40ಗೆ ಮಾರಾಟವಾಗುತ್ತಿದೆ. ಜಿಲ್ಲೆಯ ಇತರೆ ಕಡೆಯಲ್ಲಿ ಕೆಜಿಗೆ ₹10 ರಿಂದ ₹20 ವ್ಯತ್ಯಾಸದಲ್ಲಿ ಮಾರಾಟವಾಗುತ್ತಿದೆ.

ಜಿಲ್ಲೆಯ ಬಹುತೇಕ ಎಲ್ಲಾ ಎಪಿಎಂಸಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಯು ಜೋರಾಗಿಯೇ ಸಾಗಿದೆ. ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಯು ಭಾನುವಾರದಿಂದಲೆ ಆರಂಭವಾಗಿತ್ತು. ಮಾರುಕಟ್ಟೆಗೆ ತೆರಳಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿಸಿಕೊಂಡಿದ್ದರು.

₹50 ರಿಂದ ₹120ಗೆ ಮಾರಾಟ:

ಸಣ್ಣ ಬೂದುಗುಂಬಳದಿಂದ ದೊಡ್ಡ ಬೂದುಗುಂಬಳದವರೆಗೆ ಪ್ರತಿ ಕೆಜಿಗೆ ₹30ರಂತೆ ಮಾರಾಟ ಮಾಡಲಾಗುತ್ತಿತ್ತು. ಕನಿಷ್ಠ ₹50 ರಿಂದ ಗರಿಷ್ಠ ₹120ವರೆಗೆ ಬೂದುಗುಂಬಳ ಮಾರಾಟವಾಗುತ್ತಿತ್ತು. ದೊಡ್ಡ ಅಂಗಡಿ ಹಾಗೂ ದೊಡ್ಡ ವಾಹನಗಳ ಮಾಲೀಕರು ಅಗತ್ಯಕ್ಕೆ ತಕ್ಕಂತೆ ಬೂದುಗುಂಬಳಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.

ಬಾಳೆ ಕಂದು ₹30 ರಿಂದ ₹100 ಬೆಲೆ ಇತ್ತು. ದೊಡ್ಡ ಗಾತ್ರದ ನಿಂಬೆ ಹಣ್ಣು ₹12 ರಿಂದ ₹15ಕ್ಕೆ 1 ರಂತೆ ಮಾರಾಟವಾಗುತ್ತಿದ್ದರೆ, ಸಣ್ಣ ಗಾತ್ರದ ನಿಂಬೆಹಣ್ಣು ₹20ಕ್ಕೆ 2ರಂತೆ ಮಾರಾಟವಾಗುತ್ತಿತ್ತು.

ಸಾಮಾನ್ಯ ದಿನಗಳಲ್ಲಿ ₹30 ರಿಂದ ₹40ವರೆಗೆ ಇದ್ದ ಸೇವಂತಿಗೆ ಹೂವಿನ ಬೆಲೆ ಹಬ್ಬದ ಪ್ರಯುಕ್ತ ಕನಿಷ್ಠ ₹100ರಿಂದ ₹150 ವರೆಗೆ ತಲುಪಿತ್ತು. ಪ್ರತಿ ಕೆಜಿ ಮಲ್ಲಿಗೆ ಹೂವು- ₹700 - ₹800, ಕನಕಾಂಬರ- ₹600, ಕಾಕಡ ಹೂ -₹500 , ಗುಲಾಬಿ ₹200 - ₹250 , ಸೇರಿದಂತೆ ಹಲವು ಹೂವುಗಳ ಬೆಲೆ ಗಗನಮುಖಿಯಾಗಿತ್ತು.

ಹಾರಗಳ ಬೆಲೆಯಲ್ಲಿ ಹೆಚ್ಚಳ:

ವಾಹನಗಳಿಗೆ ಹಾಕುವ ಹೂವಿನ ಹಾರಗಳ ಬೆಲೆ ದುಪ್ಪಟ್ಟು ಏರಿಕೆಯಾಗಿತ್ತು. ಸಾಮಾನ್ಯ ದಿನಗಳಲ್ಲಿ ₹100 ಇದ್ದ ಹೂವಿನ ಹಾರಗಳು ಹಬ್ಬದ ಪ್ರಯುಕ್ತ ₹200 ರಿಂದ ₹250, ದೊಡ್ಡ ಗುಲಾಬಿ ಹೂವಿನ ಹಾರಗಳು ₹300ರಿಂದ ₹500 ವರೆಗೆ ಮಾರಾಟವಾಗುತ್ತಿದ್ದವು. ಆಯುಧ ಪೂಜೆಗೆ ಅಂಗಡಿ, ವಾಹನಗಳಿಗೆಲ್ಲಾ ಹೂವು ಹಾಗೂ ನಿಂಬೆ ಹಣ್ಣಿಗೆ ಅವಶ್ಯಕತೆ ಇರುವುದರಿಂದ ಇವರೆಡಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತ್ತು. ಅದಕ್ಕೆ ತಕ್ಕಂತೆ ವ್ಯಾಪಾರಸ್ಥರೂ ಬೆಲೆಯಲ್ಲಿ ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದು ಕಂಡುಬಂದಿತು. ಜನತೆ ಒಂದಷ್ಟು ಚೌಕಾಸಿ ಮಾಡಿ ಸಾಮಗ್ರಿಗಳನ್ನು ಕೊಳ್ಳುವುದರಲ್ಲಿ ಮಗ್ನರಾಗಿದ್ದರು.

ಆಯುಧ ಪೂಜೆ ಹಾಗೂ ವಿಜಯದಶಮಿಗೆ ಮಳಿಗೆಗಳು, ಕಚೇರಿಗಳು ಹಾಗೂ ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ಸಿಬ್ಬಂದಿ ಮತ್ತಿತರರಿಗೆ ಸಿಹಿ ಜೊತೆಗೆ ಕಡ್ಲೆಪುರಿ ವಿತರಿಸುವುದು ವಾಡಿಕೆ. ಹೀಗಾಗಿ ಕಡ್ಲೆಪುರಿಗೆ ಹೆಚ್ಚು ಬೇಡಿಕೆ ಇತ್ತು. ಒಂದು ಸೇರಿಗೆ ₹10 ರಿಂದ ₹12ವರೆಗೆ ಮಾರಾಟವಾಗುತ್ತಿದೆ.

ಹಣ್ಣುಗಳ ಬೆಲೆಯಲ್ಲಿ ಏರಿಕೆ:

ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸ್ವಲ್ಪ ಏರಿಕೆಯಾಗಿತ್ತು. ಏಲಕ್ಕಿ ಬಾಳೆಹಣ್ಣು ಪ್ರತಿ ಕೆಜಿಗೆ ₹130 , ದಾಳಿಂಬೆ - ₹250, ಸೇಬು ₹200, ಮಿಕ್ಸ್ ₹180, ದ್ರಾಕ್ಷಿ ₹160, ಮೂಸಂಬಿ ₹120 , ಕಿತ್ತಳೆ ₹150, ಕಪ್ಪು ದ್ರಾಕ್ಷಿ ₹160, ಸೀಬೆಹಣ್ಣು ₹100 , ಮೂಸಂಬಿ ₹120, ಕರ್ಬೂಜ - ₹60, ಅನಾನಸ್ ₹80 ವರೆಗೆ ಮಾರಾಟವಾಗುತ್ತಿದ್ದವು.

ತರಕಾರಿ ಬೆಲೆ ಸಾಮಾನ್ಯ:

ತರಕಾರಿ ಬೆಲೆಯೂ ಸಾಮಾನ್ಯವಾಗಿತ್ತು. ಮಿಕ್ಸ್ ತರಕಾರಿ ಕೆ.ಜಿ.ಗೆ ₹60, ಪ್ರತಿ ಕೆಜಿ ಕ್ಯಾರೆಟ್ ₹50, ನಾಟಿ ಬಿನೀಸ್ ₹60, ಗೆಡ್ಡೆಕೋಸು ₹60, ಟೊಮೆಟೋ ಕೆಜಿ ₹24, ಬೀಟ್‌ರೂಟ್ ₹40, ಬದನೆಕಾಯಿ ₹30, ಹೂ ಕೋಸು ₹30, ಹಾಗಲಕಾಯಿ ₹50, ಬೆಂಡೇಕಾಯಿ ₹40, ಆಲೂಗಡ್ಡೆ ₹25, ಈರುಳ್ಳಿ ₹50, ಅವರೆಕಾಯಿ ₹60, ಕೊತ್ತಂಬರಿ ಸೊಪ್ಪು ಪ್ರತಿ ಕಂತೆಗೆ ₹35 ರಿಂದ ₹40 ನಿಗದಿಪಡಿಸಲಾಗಿತ್ತು.

ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆ :

ಆಯುಧ ಪೂಜೆ ಹಬ್ಬದಲ್ಲಿ ಸಿಹಿ ತಿನಿಸುಗಳನ್ನು ಪೂಜೆಗೆ ಇಡುವುದರಿಂದ ಹಾಗೂ ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಅದಕ್ಕೂ ಹೆಚ್ಚಿನ ಬೇಡಿಕೆ ಕಂಡುಬಂದಿರುವುದರಿಂದ ಬೆಲೆಯಲ್ಲೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಬೂಂದಿ ₹200, ಮಿಲ್ಕ್ ಬರ್ಫಿ ₹560, ಹಾರ್ಲಿಕ್ಸ್ ಬರ್ಫಿ ₹620, ಲಾಡು ₹300 -₹500, ಮೈಸೂರು ಪಾಕ್ ₹800, ಜಹಂಗೀರ್ ₹300, ಸೋಂಪಾಪುಡಿ ₹560 , ಹಲ್ವಾ ₹440 ಸೇರಿ ಅನೇಕ ಸಿಹಿ ಪದಾರ್ಥಗಳ ಬೆಲೆ ಕನಿಷ್ಠ ₹30ರಿಂದ ₹50ವರೆಗೆ ಹೆಚ್ಚಾಗಿತ್ತು. ಮತ್ತು ಪ್ರತಿ ಕೆಜಿ ಸ್ಪೆಷಲ್ ಖಾರ- ₹320 , ಸಾಮಾನ್ಯ ಖಾರ ₹300 ವರೆಗೆ ಮಾರಾಟವಾಗುತ್ತಿದ್ದವು.