ಸಾರಾಂಶ
ಕೊಪ್ಪಳ: ಕೇವಲ ಪತ್ರವನ್ನು ಕಳಿಸುವ ಮೂಲಕ ಮೊದಲಿಗೆ ಸಂಪರ್ಕ ಜಾಲ ಬೆಸೆಯುತ್ತಿದ್ದ ಅಂಚೆ ಇಲಾಖೆ ಇಂದು ಹತ್ತು ಹಲವು ಕ್ಷೇತ್ರಗಳಲ್ಲೂ ಸೇವೆ ಪ್ರಾರಂಭಿಸಿದ್ದು, ಅದರಲ್ಲೂ ಮಾರುಕಟ್ಟೆಯ ಕ್ರಾಂತಿಯನ್ನೇ ಮಾಡುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸಾಹಿತ್ಯಭವನದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ದೇಶಿಯವಾಗಿ ಅಷ್ಟೇ ಅಲ್ಲ, ವಿಶ್ವದಾದ್ಯಂತ ಮಾರುಕಟ್ಟೆಯನ್ನು ಕಲ್ಪಿಸಲು ಮುಂದಾಗಿರುವುದು ಬಹುದೊಡ್ಡ ಕ್ರಾಂತಿಯಾಗಿದೆ. ಇದರಿಂದ ರೈತರು ತಮ್ಮ ಹೊಲದಿಂದಲೇ ತಮ್ಮ ಉತ್ಪಾದನೆಯನ್ನು ನಾನಾ ರಾಜ್ಯ, ದೇಶಕ್ಕೂ ಕಳಿಹಿಸುವುದಕ್ಕೆ ಸಾಧ್ಯವಾಗಿದೆ. ಈಗಾಗಲೇ ರೈತರು ತಮ್ಮ ಉತ್ಪನ್ನಗಳನ್ನು ಅಂಚೆ ಇಲಾಖೆಯ ಮೂಲಕ ಮಾರುಕಟ್ಟೆ ಮಾಡಿಕೊಳ್ಳುತ್ತಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿಯಾಗಿದೆ ಎಂದರು.ತೋಟಗಾರಿಕಾ ಇಲಾಖೆ ಕೈಜೋಡಿಸಿರುವುದರಿಂದ ಈಗಾಗಲೇ ರೈತರು ತಮ್ಮ ತೋಟಗಾರಿಕಾ ಬೆಳೆಗಳನ್ನು ಅಂಚೆ ಮೂಲಕ ಕಳುಹಿಸಿ, ಮಾರುಕಟ್ಟೆಯನ್ನು ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದರು.ಜನರ ತೆರಿಗೆ ಹಣದಲ್ಲಿ ವೇತನ ಪಡೆಯುವ ನಾನಾ ಸರ್ಕಾರಿ ಇಲಾಖೆಯ ಸಿಬ್ಬಂದಿ ಮತ್ತು ನೌಕರರು ಸರಿಯಾಗಿ ಕೆಲಸ ನಿಭಾಯಿಸುತ್ತಿಲ್ಲ. ಈ ಹಿಂದೆ ಶಿಕ್ಷಣ ಇಲಾಖೆ ಗೌರವ ಬರುವಂತೆ ಇತ್ತಾದರೂ ಈಗ ಅದು ಸಹ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಂಚೆ ಇಲಾಖೆ ಮಾತ್ರ ತನ್ನ ಗುಣಮಟ್ಟದ ಸೇವೆಯಲ್ಲಿ ಹಿಂದೆ ಸರಿದಿಲ್ಲ, ಬದಲಾಗಿ ಮತ್ತಷ್ಟು ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ಪ್ರಾರಂಭಿಸಿದೆ ಎಂದು ಬಣ್ಣಿಸಿದರು.ಕೊಪ್ಪಳದಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾಗಿ ಕೃಷ್ಣಾ ಉಕ್ಕುಂದ ಬಂದ ಮೇಲೆ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಯ ಕ್ರಾಂತಿಯೇ ಆಗಿದೆ. ರೈತರಿಗೆ ಬೆಳೆಯಲು ಅಷ್ಟೇ ಮಾರ್ಗದರ್ಶನ ನೀಡುತ್ತಿಲ್ಲ, ಬದಲಾಗಿ ಮಾರುಕಟ್ಟೆಯನ್ನು ಕಲ್ಪಸಿಕೊಡುವ ಮಹಾನ ಕಾರ್ಯ ಮಾಡುತ್ತಿದ್ದಾರೆ. ಇದೇ ರೀತಿ ಎಲ್ಲ ಇಲಾಖೆಗಳು ಕೈಜೋಡಿಸಬೇಕು ಎಂದರು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಅಂಚೆ ಇಲಾಖೆ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ. ಅದರಲ್ಲೂ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಅನೇಕ ಹೆಣ್ಣುಮಕ್ಕಳ ಬದುಕು ಹಸನಾಗಿದೆ ಎಂದರು.ಅಂಚೆ ಇಲಾಖೆಯ ಸೇವೆಯನ್ನು ನಾವು ಸ್ಮರಿಸಲೇಬೇಕು. ಈ ಹಿಂದೆ ಕೇವಲ ಪತ್ರಕ್ಕೆ ಮಾತ್ರ ಸೀಮಿತವಾಗಿದ್ದ ಇಲಾಖೆ ಈಗ ಹಲವಾರು ಹೊಸ ಹೊಸ ಸೇವೆಗಳನ್ನು ಪ್ರಾರಂಭಿಸಿ, ಬ್ಯಾಂಕಿಂಗ ಸೇವೆಯನ್ನು ನೀಡುತ್ತಿದೆ ಎಂದರು.
ಕೊಪ್ಪಳ ವಿವಿ ಕುಲಪತಿ ಬಿ.ಕೆ. ರವಿ ಮಾತನಾಡಿ, ನನಗೂ ಮತ್ತು ಅಂಚೆ ಇಲಾಖೆಗೂ ಅವಿನಾಭಾವ ಸಂಬಂಧ ಇದೆ. ನಮ್ಮ ತಾತನು ಸಹ ಅಂಚೆ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಪೋಸ್ಟ್ ಭೀಮಯ್ಯ ಎಂದೇ ಕರೆಯುತ್ತಿದ್ದರು ಎಂದರು.ಕೊಪ್ಪಳ ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣಾ ಉಕ್ಕುಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಮುಖಂಡರಾದ ಮಂಜುಳಾ ಕರಡಿ, ಮಹಾಲಕ್ಷ್ಮಿ ಕಂದಾರಿ, ಮಹಾಂತೇಶ ಮೈನಳ್ಳಿ ಸೇರಿದಂತೆ ಮೊದಲಾದವರು ಇದ್ದರು.
ಅಂಚೆ ಇಲಾಖೆಯ ಅಡಿವೆಪ್ಪ ಕಾರ್ಯಕ್ರಮ ನಿರೂಪಿಸಿದರೇ ಗವಿಸಿದ್ದಪ್ಪ ಹಳ್ಳಿ ಸ್ವಾಗತಿಸಿದರು.