ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ವಾರ್ಷಿಕ ಪರೀಕ್ಷೆ ಸುಲಭವಾಗಿಸಿ ಉತ್ತಮ ಅಂಕ ಗಳಿಕೆಗೆ ನೆರವಾಗಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯ ತಜ್ಞರು ರಚಿಸಿದ ಮಾರ್ಕ್ಸ್ ಸ್ಕೋರರ್ ಪುಸ್ತಕಗಳನ್ನು ತಾಲೂಕಿನ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಇಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಕಲಿಕಾ ಕೇಂದ್ರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲೂಕಿನ ೩೨೦೦ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತ ವಿಷಯದ ಮಾರ್ಕ್ಸ್ ಸ್ಕೋರರ್ ಪುಸ್ತಕ ನೀಡಲಾಗುತ್ತಿದೆ. ಇದು ಪ್ರಸ್ತುತ ವರ್ಷ ಪ್ರಾಯೋಗಿಕವಾಗಿ ನೀಡುತ್ತಿದ್ದು, ಮುಂದಿನ ವರ್ಷಗಳಲ್ಲಿ ಎಲ್ಲ ವಿಷಯಗಳ ಇಂಥ ಹೊತ್ತಿಗೆ ನೀಡುವ ಉದ್ದೇಶವಿದೆ. ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಉಜ್ವಲಗೊಳಿಸಲು ಸಹಕಾರಿಯಾಗುವ ಪುಸ್ತಕ ಇದಾಗಿದೆ. ಪಟ್ಟಣದ ವಿದ್ಯಾರ್ಥಿಗಳಿಗೆ ಓದಿನ ಸೌಲಭ್ಯಗಳು ಹೆಚ್ಚು ದೊರೆಯುತ್ತವೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ಕಷ್ಟ ಸಾಧ್ಯ. ಅದರಲ್ಲೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಇಂಥ ಸೌಲಭ್ಯಗಳಿಂದ ವಂಚಿತವಾಗುವ ಸಂದರ್ಭಗಳೇ ಹೆಚ್ಚು ಎಂದ ಅವರು, ಈ ಬಾರಿ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಅತ್ಯುತ್ತಮ ಹಾಗೂ ಮಾದರಿಯಾಗುವ ವಿಶ್ವಾಸವಿದೆ. ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಕಾಳಜಿ ವಹಿಸಿದೆ ಎಂದರು.
ಪುಸ್ತಕ ಬಿಡುಗಡೆಗೊಳಿಸಿದ ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ಎರಡು ಪುಸ್ತಕಗಳು ಅತ್ಯಂತ ಉಪಕಾರಿಯಾಗಲಿವೆ. ಹಿಂದಿನ ಹಲವು ವರ್ಷಗಳ ಪ್ರಶ್ನೆ ಪತ್ರಿಕೆಗಳು, ವಿವಿಧ ಪ್ರಶ್ನಾವಳಿಗಳು, ಸುಲಭ ಅರ್ಥೈಸುವಿಕೆಗೆ ಸಹಕಾರಿಯಾಗಿವೆ. ಪರೀಕ್ಷೆ ಭಯ ನಿವಾರಣೆ ಸೇರಿದಂತೆ ವಿದ್ಯಾರ್ಥಿಗಳನ್ನು ನಿರ್ಭಯವಾಗಿ ಪರೀಕ್ಷೆಗೆ ಸಿದ್ಧಗೊಳಿಸುವ ಅತ್ಯಂತ ಮೌಲಿಕ ಪುಸ್ತಕಗಳಾಗಿವೆ. ಶಾಸಕ ಶ್ರೀನಿವಾಸ ಮಾನೆ ಅವರು ಕಾಳಜಿ ವಹಿಸಿ ಪುಸ್ತಕ ವಿತರಿಸುತ್ತಿದ್ದಾರೆ ಎಂದರು.ಪರಿವರ್ತನಾ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಕ್ಕಾಗಿ ಹಲವು ತರಬೇತಿಗಳನ್ನು ನಡೆಸುತ್ತಿರುವುದಲ್ಲದೆ, ಈಗ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಶೈಕ್ಷಣಿಕ ಸೌಲಭ್ಯ ತಲುಪಿಸುವಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಮುಂದಾಗಿದ್ದಾರೆ ಎಂದರು.
ಇಂಡಿಯಾ ೪೧ ಕ್ಲಬ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಸರಸ್ವತುಲಾ, ಎಕ್ಸೆನ್ ಅಗ್ರಿಸೈನ್ಸ್‌ನ ಅಧಿಕಾರಿ ಅನಿಲ್ ಮಲ್ಲಪ್ಪ, ೪೧ ಕ್ಲಬ್ ರಾಷ್ಟ್ರೀಯ ಕೋಶಾಧ್ಯಕ್ಷ ಮಧುಬಾಬು, ಏರಿಯಾ ೧೦ ಚೇರಮನ್ ಕಿರಣ ಹೆಬಸೂರ, ಎಫ್‌ಟಿಡಿಇ ಏರಿಯಾ ಕನ್ವೇನರ್ ಪರಶುರಾಮ ಶಾಲಗಾರ ಇದ್ದರು.