ಮದುವೆ, ಸಭೆ-ಸಮಾರಂಭದ ಮಾಹಿತಿ ಕಡ್ಡಾಯವಾಗಿ ಸಲ್ಲಿಸಿ: ಡಿಸಿ ಸೂಚನೆ

| Published : Mar 31 2024, 02:00 AM IST

ಮದುವೆ, ಸಭೆ-ಸಮಾರಂಭದ ಮಾಹಿತಿ ಕಡ್ಡಾಯವಾಗಿ ಸಲ್ಲಿಸಿ: ಡಿಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ನಿಗದಿಯಾಗಿರುವ ಮದುವೆ, ಜನ್ಮದಿನ ಹಾಗೂ ಇತರೆ ಸಭೆ-ಸಮಾರಂಭಗಳ ದಿನಾಂಕಗಳ ಮಾಹಿತಿ ಸಲ್ಲಿಸಲು ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲು ಜಿಲ್ಲೆಯ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ತಮ್ಮಲ್ಲಿ ನಿಗದಿಯಾಗಿರುವ ಮದುವೆ, ಜನ್ಮದಿನ ಹಾಗೂ ಇತರೆ ಸಭೆ-ಸಮಾರಂಭಗಳ ದಿನಾಂಕಗಳನ್ನು ಕಡ್ಡಾಯವಾಗಿ ಆಯಾ ತಾಲೂಕು ತಹಸೀಲ್ದಾರರಿಗೆ ಮಾಹಿತಿ ಸಲ್ಲಿಸತಕ್ಕದ್ದು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಕಲ್ಯಾಣ ಮಂಟಪ ಹಾಗೂ ಸಭಾಭವನಗಳ ಮಾಲೀಕರ ಸಭೆಯಲ್ಲಿ ಮಾತನಾಡಿದರು.

ಚುನಾವಣಾ ಕರ್ತವ್ಯ ಮೇಲಿರುವ ಎಸ್‌ಎಸ್‌ಟಿ, ಎಫ್‌ಎಸ್‌ಟಿ ಹಾಗೂ ವಿಎಸ್‌ಟಿ ತಂಡಗಳು ಈ ದಿನಾಂಕಗಳಂದು ಆಯಾ ಸಭೆ-ಸಮಾರಂಭಗಳಿಗೆ ಆಗಮಿಸಿ ನಿಗಾ ವಹಿಸುತ್ತವೆ. ಮಾಲೀಕರು ತಮ್ಮ ಸಭಾಭವನದಲ್ಲಿ ಪರವಾನಗಿ ಇಲ್ಲದೇ ಯಾವುದಾದರೂ ರಾಜಕೀಯ ಚಟುವಟಿಕೆ ಜರುಗಿಸಿದ್ದಲ್ಲಿ ಅಂತಹವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳು ರಾಜಕೀಯ ಚುನಾವಣಾ ಪ್ರಚಾರಕ್ಕೆ ದುರುಪಯೋಗ ವಾಗಬಾರದು. ಚುನಾವಣಾ ಪ್ರಚಾರಕ್ಕೆ ಪಕ್ಷಗಳು ಅನುಮತಿ ಪಡೆದಿದ್ದಲ್ಲಿ ಅಭ್ಯಂತರವಿಲ್ಲ. ಧಾರ್ಮಿಕ ಕಟ್ಟಡಗಳಲ್ಲಿ, ಕಲ್ಯಾಣ ಮಂಟಪ ಇದ್ದಲ್ಲಿ ತೀವ್ರ ನಿಗಾ ವಹಿಸಲಾಗುವುದೆಂದು. ಮಾಲೀಕರು ದಿನಾಂಕಗಳನ್ನುಇ-ಮೇಲ್ deo.dharwad@gmail.com ಗೆ ಸಹ ಸಲ್ಲಿಸಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಯಾವುದೇ ಪ್ರಕಾಶಕರು ಅಥವಾ ಮುದ್ರಕರು ಚುನಾವಣೆಗೆ ಸಂಬಂಧಪಟ್ಟ ಕರಪತ್ರ ಅಥವಾ ಕೈ-ಬಿಲ್, ಫಲಕಗಳು, ಬ್ಯಾನರ್ಸ್, ಬಂಟಿಂಗ್ಸ್, ಪ್ಲೆಕ್ಸ್ ಅಥವಾ ಭಿತ್ತಿಪತ್ರಗಳು, ಹೆಸರು ವಿಳಾಸ, ದಿನಾಂಕ ಮತ್ತು ಪ್ರತಿಗಳ ಸಂಖ್ಯೆ ಇಲ್ಲದೆ ಮುದ್ರಿಸುವಂತಿಲ್ಲ ಮತ್ತು ಪುಕಟಿಸುವಂತಿಲ್ಲ. ಯಾವುದೇ ವ್ಯಕ್ತಿಯು ಮುದ್ರಿಸುವ ಪೂರ್ವದಲ್ಲಿ ಅವರಿಂದ ಸಹಿ ಮಾಡಲ್ಪಟ್ಟ ಮತ್ತು ಅವರ ವೈಯಕ್ತಿಕವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ಧೃಡೀಕರಿಸಲ್ಪಟ್ಟ ಪ್ರಕಾಶಕರ ಗುರತಿನ ಘೋಷಣೆಯನ್ನು ದ್ವಿಪ್ರತಿಯಲ್ಲಿ ಮುದ್ರಣಕ್ಕೆ ಸಲ್ಲಿಸದ ಹೊರತು ಮತ್ತು ಡಾಕ್ಯುಮೆಂಟ್‌ನ ಮುದ್ರಣದ ನಂತರ ಮೂರು ದಿನಗಳೊಳಗಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಲು ಸೂಚಿಸಿದರು.

ನೀತಿ ಸಂಹಿತೆ ನೋಡಲ್ ಅಧಿಕಾರಿ ಮೋನಾ ರಾವುತ್, ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳಾಗಡ್ಡಿ, ಜಿಲ್ಲೆಯ ಕಲ್ಯಾಣಮಂಟಪಗಳ ಮಾಲೀಕರು ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸಭೆಯಲ್ಲಿದ್ದರು.