ಸಾರಾಂಶ
ಸರ್ಕಾರದ ಖಾಸಗೀಕರಣ ನೀತಿಯಿಂದ ರೈತರ ಕೃಷಿ ಭೂಮಿ ಕಂಪನಿಗಳ ಪಾಲಾಗುತ್ತಿದೆ. ಅತಿಯಾದ ರಸಗೊಬ್ಬರ, ಕೀಟನಾಶಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಕೆಲವು ಕಡೆ ಚೌಳು ಭೂಮಿಯಾಗಿ ಉಪಯೋಗಕ್ಕೆ ಬಾರದಂತಾಗಿದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೃಷಿ ಕ್ಷೇತ್ರ ದುರ್ಬಲವಾಗುತ್ತಿದ್ದು, ರೈತರ ಆತ್ಮಹತ್ಯೆಗಳು ಮುಂದುವರಿಯುತ್ತಿದೆ. ರೈತರ ಮಕ್ಕಳು ಕೃಷಿಯಿಂದ ವಿಮುಖರಾಗಿ ಬೇರೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಸರ್ಕಾರಗಳು, ಜನಪ್ರತಿನಿಧಿಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಗಳ ಒಕ್ಕೂಟದ ರಾಜ್ಯ ಸಂಚಾಲಕ ಸಿ.ವಿ.ಲೋಕೇಶ್ ಗೌಡ ಆರೋಪಿಸಿದರು.ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರ್ನಾಟಕ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರಗುಂದ ನವಲಗುಂದ ರೈತ ಬಂಡಾಯದ ಹುತಾತ್ಮ ರೈತರ 44ನೇ ದಿನಾಚರಣೆಯನ್ನು ಜುಲೈ 21ರಂದು ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಲಾಗಿದೆ. ನಗರದ ಅಂಬೇಡ್ಕರ್ ಭವನದಲ್ಲಿ ರೈತ ಮುಖಂಡರ ಸಮಾವೇಶ ಆಯೋಜಿಸಲಾಗಿದೆ ಎಂದರು.
ರೈತಸಂಘದ ಮುಖಂಡರು ಭಾಗಿಹುತಾತ್ಮ ರೈತ ದಿನಾಚರಣೆಯಲ್ಲಿ ರಾಜ್ಯ ರೈತ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್, ರೈತ ಮುಖಂಡರಾದ ವಿ.ಆರ್. ನಾರಾಯಣರೆಡ್ಡಿ, ಮಾಧವರೆಡ್ಡಿ, ಬಲ್ಲೂರು ರವಿಕುಮಾರ್, ಕರಿಬಸಪ್ಪಗೌಡ, ಮಾನಪ್ಪಪೂಜಾರಿ, ಶಿವಕುಮಾರ್, ಶರಣಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಖಾಸಗೀಕರಣ ನೀತಿಯಿಂದ ರೈತರ ಕೃಷಿ ಭೂಮಿ ಕಂಪನಿಗಳ ಪಾಲಾಗುತ್ತಿದೆ. ಅತಿಯಾದ ರಸಗೊಬ್ಬರ, ಕೀಟನಾಶಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಕೆಲವು ಕಡೆ ಚೌಳು ಭೂಮಿಯಾಗಿ ಉಪಯೋಗಕ್ಕೆ ಬಾರದಂತಾಗಿದೆ ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳಾದ ಎಚ್.ಎನ್. ಗೋವಿಂದರೆಡ್ಡಿ, ವೆಂಕಟಶಿವಾರೆಡ್ಡಿ, ಗೋವಿಂದಪ್ಪ, ಕೃಷ್ಣಪ್ಪ, ಆದಿನಾರಯಣಪ್ಪ, ಚೌಡಪ್ಪ. ಈಶ್ವರಪ್ಪ, ಅಶ್ವತ್ಥಪ್ಪ, ವೆಂಕಟರೆಡ್ಡಿ ಮತ್ತಿತರರು ಇದ್ದರು.