ಸಾರಾಂಶ
ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು
ತಾಲೂಕಿನ ಮಸಬಹಂಚಿನಾಳ ಗ್ರಾಮದ ಪುರಾತನ ಶ್ರೀಮಾರುತೇಶ್ವರ ದೇವಸ್ಥಾನವನ್ನು ಭಕ್ತರು ಶಿಲೆಯಲ್ಲಿ ನಿರ್ಮಿಸಿದ್ದು, ಮಾದರಿ ರೀತಿಯಲ್ಲಿ ದೇವಸ್ಥಾನ ನಿರ್ಮಾಣ ಆಗಿ ಭಕ್ತರನ್ನು ಆಕರ್ಷಿಸುತ್ತಿದೆ.ಕಳೆದ ಮೂರು ವರ್ಷದ ಹಿಂದೆ ಹಳೆ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲು ಗ್ರಾಮಸ್ಥರು ಸಂಕಲ್ಪಿಸಿದರು. ನಂತರ ಕೊಪ್ಪಳ ಗವಿಮಠದ ಶ್ರೀಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ದರ್ಶನ ಪಡೆದು ಅವರ ಮಾರ್ಗದರ್ಶನದಂತೆ ದೇವಸ್ಥಾನವನ್ನು ಶಿಲೆಯಲ್ಲಿ ನಿರ್ಮಿಸಲು ತೀರ್ಮಾನಿಸಿದರು. ಮೊದಲಿನಿಂದಲೂ ಐತಿಹ್ಯ ಹೊಂದಿರುವ ಮಸಬಹಂಚಿನಾಳ ದೇವಸ್ಥಾನವನ್ನು ಶಿಲಾ ದೇವಸ್ಥಾನ ಮಾಡಲು ಗ್ರಾಮಸ್ಥರು ಒಗ್ಗೂಡಿದರು. ವಿಶೇಷವೆಂಬಂತೆ ಎಲ್ಲ ಗ್ರಾಮದಲ್ಲಿ ಮಾರುತೇಶ್ವರ ದೇವರು ದಕ್ಷಿಣಾಭಿಮುಖವಾಗಿದ್ದರೆ ಮಸಬಹಂಚಿನಾಳ ಗ್ರಾಮದಲ್ಲಿ ಪಶ್ಚಿಮಾಭಿಮುಖಿಯಾಗಿದ್ದಾನೆ.
ಸಂಕಲ್ಪಿತರಾದ ಗ್ರಾಮಸ್ಥರು: ಗ್ರಾಮದ ಹಿರಿಯರು, ಗ್ರಾಮಸ್ಥರು, ಭಕ್ತರು ಹಾಗೂ ಗ್ರಾಮದವರಾದ ಮಾಜಿ ಸಚಿವ ಹಾಲಪ್ಪ ಆಚಾರ್ ದೇವಸ್ಥಾನ ಹಳೆಯದಾಗಿರುವುದನ್ನು ಮನಗಂಡರು. ಕಟ್ಟಿಗೆ ಕಂಬಗಳಿಂದ ಇದ್ದ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲು ತೀರ್ಮಾನಿಸಿದರು. ಜನರ ಸಂಕಲ್ಪದಂತೆ ದೇವಸ್ಥಾನ ನಿರ್ಮಾಣ ಮಾದರಿ ತಯಾರಿಸಿ ಕಳೆದ ಮೂರು ವರ್ಷದ ಹಿಂದೆ ಹಳೆ ದೇವಸ್ಥಾನವನ್ನು ಕೆಡವಿ, ಕಲಾಕಾರರನ್ನು ಗುರುತಿಸಿ ತೀರ್ಮಾನ ಕಾರ್ಯ ಕೈಗೊಂಡರು.ಸಂಪೂರ್ಣ ಶಿಲೆಯಲ್ಲಿ ನಿರ್ಮಾಣ: ಮಾರುತೇಶ್ವರ ದೇವಸ್ಥಾನವನ್ನು ಸಂಪೂರ್ಣವಾಗಿ ಶಿಲೆಯಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ. ಹಂಪಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ ಕಲ್ಲುಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಗರ್ಭಗುಡಿ, ದೇವಸ್ಥಾನ ಹಾಗೂ ಗೋಪುರ ನಿರ್ಮಾಣ ಮಾಡಲಾಗಿದೆ. ಶಿಲಾ ದೇವಸ್ಥಾನ ಜನಾಕರ್ಷಣೆ ಆಗಿದ್ದು, ಮಾದರಿ ರೀತಿಯಲ್ಲಿ ನಿರ್ಮಾಣವಾಗಿದೆ.
ಇನ್ನೂ ಅಪಾರ ಕಾರ್ಯ:ಇನ್ನೂ ದೇವಸ್ಥಾನದ ಇತಿಹಾಸ ಸಾರುವ ಹೊಂಡ, ದೀಪದ ಕಂಬ, ದೇವಸ್ಥಾನ ಬಳಿ ಎರಡು ಮುಖ್ಯದ್ವಾರ, ಭಕ್ತರಿಗೆ ತಂಗಲು ದೇವಸ್ಥಾನದ ನಾಲ್ಕು ದಿಕ್ಕಿಗೆ ವಿಶ್ರಾಂತಿ ತಾಣ, ಕಲ್ಲಿನ ಕಾಂಪೌಂಡ್ ಶಿಲೆಯಲ್ಲಿಯೇ ನಿರ್ಮಾಣ ಆಗಲಿದೆ. ಅಲ್ಲದೆ ದೇವಸ್ಥಾನಕ್ಕೆ ನೂತನ ಕಳಸ¸ ನೂತನ ಪಲ್ಲಕ್ಕಿ ಸಹ ನಿರ್ಮಿಸಲು ಭಕ್ತರು ತೀರ್ಮಾನಿಸಿದ್ದಾರೆ.
ದೇವಸ್ಥಾನದಲ್ಲಿರುವ ಸಣ್ಣ, ಸಣ್ಣ ದೇವಾಲಯಗಳಾಗಿರುವ ಮೈಲಾರ ಲಿಂಗೇಶ್ವರ ದೇವಸ್ಥಾನ, ವಿಘ್ನೇಶ್ವರ, ತುಳಸಿ ಕಟ್ಟೆ, ನಂದಿ ದೇವಸ್ಥಾನ, ನವಗ್ರಹ ದೇವಸ್ಥಾನ ಶಿಲೆಯಲ್ಲಿಯೇ ನಿರ್ಮಾಣ ಆಗಲಿವೆ. ಇಟಗಿ ದಾರಿಯಲ್ಲಿರುವ ಹಟ್ಟಿ ಭರಮಪ್ಪ ಪಾದಗಟ್ಟಿ ಹಾಗೂ ಮಜ್ಜಲ ಭಾವಿ ಸಹ ಜೀರ್ಣೋದ್ಧಾರ ಮಾಡಲಾಗಿದೆ.ಭಕ್ತರ ಸಹಕಾರದಲ್ಲಿ ನಿರ್ಮಾಣ: ಬಹುದೊಡ್ಡ ಶಿಲಾದೇವಸ್ಥಾನ ನಿರ್ಮಾಣ ಗ್ರಾಮಸ್ಥರ ಹಾಗೂ ಭಕ್ತರ ಸಹಕಾರದಲ್ಲಿ ಜರುಗುತ್ತಿದೆ. ಪ್ರತಿ ವರ್ಷ ಜರುಗುವ ಕಾರ್ತಿಕ ಮಹೋತ್ಸವಕ್ಕೆ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಿದ್ದು, ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಭಕ್ತರು ಸಹ ದೇವಸ್ಥಾನ ನಿರ್ಮಾಣ ಸೇವಾ ಸಮಿತಿಗೆ ತಮ್ಮ ಭಕ್ತಿ ಧನ ಸಮರ್ಪಣೆ ಮಾಡುತ್ತಿದ್ದು, ಕೋಟಿ ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಆಗುತ್ತಿದೆ. ಊಟದ ಹಾಲಿನ ಅಭಿವೃದ್ಧಿ, ಸುಸಜ್ಜಿತ ಶೌಚಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಮಹಾದ್ವಾರ ಸಹ ನಿರ್ಮಾಣ ಮಾಡುವ ಸಂಕಲ್ಪ ಗ್ರಾಮಸ್ಥರದ್ದಾಗಿದೆ. ತಮಿಳುನಾಡಿನಿಂದ ಶಿಲಾ ದೇವಸ್ಥಾನ ನಿರ್ಮಾಣದ ಕಲಾವಿದರು ಬಂದು ದೇವಸ್ಥಾನ ನಿರ್ಮಿಸುತ್ತಿದ್ದಾರೆ.
ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವರು ಈ ಭಾಗ ಜನರ ಆರಾಧ್ಯ ದೈವ. ದೇವಸ್ಥಾನಕ್ಕೆ ಅಪಾರ ಪ್ರಮಾಣದ ಭಕ್ತರು ಆಗಮಿಸುತ್ತಾರೆ. ಆ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗು ಭಕ್ತರ ಸಹಕಾರದಲ್ಲಿ ದೇವಸ್ಥಾನವನ್ನು ಸಂಪೂರ್ಣವಾಗಿ ಶಿಲೆಯಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿದಿದೆ. ಇನ್ನೂ ಇತರೆ ಕೆಲಸಗಳು ಸಹ ಶಿಲೆಯಲ್ಲಿ ನಿರ್ಮಾಣ ಆಗಲಿವೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.