ಸಮೀಪದ ಮೂರ್ನಾಡಿನ ಮಾರುತಿ ಶಾಲೆಯ ವಿದ್ಯಾರ್ಥಿಗಳು , ಶಿಕ್ಷಕರು ತನಲ್ ಕೂರ್ಗ್ ಆಶ್ರಮಕ್ಕೆ ಭೇಟಿ ಕೊಟ್ಟು ಆಶ್ರಮವಾಸಿ ಹಿರಿಯರನ್ನು ಮನರಂಜಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಮೂರ್ನಾಡಿನ ಮಾರುತಿ ಶಾಲೆಯ ವಿದ್ಯಾರ್ಥಿಗಳು , ಶಿಕ್ಷಕರು ತನಲ್ ಕೂರ್ಗ್ ಆಶ್ರಮಕ್ಕೆ ಭೇಟಿ ಕೊಟ್ಟು ಆಶ್ರಮವಾಸಿ ಹಿರಿಯರನ್ನು ಮನರಂಜಿಸಿದರು.

ಮೂರ್ನಾಡಿನ ಮಾರುತಿ ಶಾಲೆಯ 111 ವಿದ್ಯಾರ್ಥಿಗಳು ತಮ್ಮ ಶಿಕ್ಷಕ ವೃಂದ ಮಡಿಕೇರಿಯಲ್ಲಿರುವ ತನಲ್ ಕೂರ್ಗ್ ಆಶ್ರಮಕ್ಕೆ ಭೇಟಿ ಕೊಟ್ಟು ಆಶ್ರಮವಾಸಿಗಳಿಗೆ

ಬೇಕಾದ ತಿಂಡಿ ತಿನಿಸು ರೇಷನ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಖರೀದಿಸಿ ಆಶ್ರಮಕ್ಕೆ ನೀಡಿದರು. ಆಶ್ರಮ ವಾಸಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ

ಕೂಡ ಶಾಲೆಯ ವತಿಯಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಡು, ನೃತ್ಯ ಇನ್ನಿತರ ಮನೋರಂಜನ ಕಾರ್ಯಕ್ರಮ ನೀಡಿ ಹಿರಿಯರನ್ನು ಮನರಂಜಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು

ಮಾತನಾಡಿ ನಾವು ಅನಾವಶ್ಯಕವಾಗಿ ಪೋಲು ಮಾಡುವ ಹಣವನ್ನು ಹಿರಿಯ ಜೀವಿಗಳ ಆರೈಕೆಗೆ ಮೀಸಲಿಟ್ಟರೆ ಅನೇಕ ಜೀವಗಳ ಸಂರಕ್ಷಣೆ ಮಾಡಬಹುದು ಎಂದರು. ಮುಂದಿನ ದಿನಗಳಲ್ಲಿ ತನಲ್ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ತನಲ್ ಕೂರ್ಗ್ ಆಶ್ರಮದ ಅಧ್ಯಕ್ಷ ಮೊಹಮ್ಮದ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು, ಉತ್ತಮ ಪ್ರಜೆಗಳಾಗಿ ದೇಶಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಹಿತ ವಚನ ನುಡಿದರು. ತನಲ್ ಆಶ್ರಮದಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಕಲರವ ಮೂಡಿ ಬಂತು. ಹಿರಿಯರನ್ನ ಕಂಡ ಮಕ್ಕಳು ಮತ್ತು ಶಿಕ್ಷಕರು ಭಾವುಕರಾದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಸರಳ, ಸಾಜಿದಾ, ದಮಯಂತಿ, ಪ್ರಿಯಾಂಕಾ ಮತ್ತು ದಿವ್ಯಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.