ಮಾರುತಿರಾವ ಆದರ್ಶಗಳು ಸದಾ ಅನುಕರಣೀಯ: ಪರಮೇಶ್ವರ

| Published : Dec 28 2023, 01:46 AM IST / Updated: Dec 28 2023, 01:47 AM IST

ಸಾರಾಂಶ

ಮಾರುತಿರಾವ ಮಾಲೆಯವರೂ ಆದರ್ಶ ಬದುಕು ಕಟ್ಟಿಕೊಂಡವರು, ಇಂತಹವರ ನಿಧನ ಬರೀ ಕಾಂಗ್ರೆಸ್‌ ಪಕ್ಷಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೆ ಬಹುದೊಡ್ಡ ನಷ್ಟ: ಗೃಹ ಸಚಿವ ಡಾ. ಜಿ ಪರಮೇಶ್ವರ

ಕನ್ನಡಪ್ರಭ ವಾರ್ತೆ ಕಲಬುರಗಿ

ಸಾರ್ವಜನಿಕ ಬದುಕಲ್ಲಿ ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆಯಂತಹ ಹಲವು ಮೌಲ್ಯ, ಆದರ್ಶಗಳು ಮಂಕಾಗುತ್ತಿರುವ ಈ ದಿನಮಾನಗಳಲ್ಲಿ ಅವೆಲ್ಲವನ್ನು ಮೈಗೂಡಿಸಿಕೊಂಡು ಮಾರುತಿರಾವ ಮಾಲೆಯವರೂ ಆದರ್ಶ ಬದುಕು ಕಟ್ಟಿಕೊಂಡವರು, ಇಂತಹವರ ನಿಧನ ಬರೀ ಕಾಂಗ್ರೆಸ್‌ ಪಕ್ಷಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೆ ಬಹುದೊಡ್ಡ ನಷ್ಟವೆಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ.

ಕಲಬುರಗಿಯಲ್ಲಿ ನಿಧನರಾದ ಮಾಜಿ ಎಂಎಲ್‌ಸಿ, ತುಮಕೂರು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಕಲಬುರಗಿ ಕೆಪಿಎಸ್‌ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾಗಿದ್ದ ಮಾರುತಿರಾವ ಮಾಲೆಯವರ ಕುರಿತಾಗಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಲ್ಲಿ ಬುಧವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾರುತಿ ಮಾಲೆಯವರು ತಮ್ಮ ತಂದೆಯವರು ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರ ಆತ್ಮೀಯರಾಗಿದ್ದರು. ಇ‍ವರೊಂದಿಗೆ ಸೇರಿಕೊಂಡು ತುಮಕೂರು ಹಾಗೂ ಕಲಬುರಗಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಕೊಡುಗೆ ನೀಡಿದವರು. ಸಜ್ಜನರಾಗಿದ್ದುಕೊಂಡೇ ಸಮಾಜ ಸೇವೆ ಹೇಗೆ ಮಾಡಬೇಕು ಎಂಬುದಕ್ಕೆ ಮಾಲೆಯವರ ಬದುಕೇ ಕನ್ನಡಿ ಎಂದರು.

ಮಾಲೆಯವರು ಸರಕಾರಿ ನೌಕರಿ ಬಿಟ್ಟುಕೊಟ್ಟು ಸಮಾಜ ಸೇವೆಯ ಸೆಳೆತದೊಂದಿಗೆ ಹೊರಬಂದವರು. 1969ರಲ್ಲಿ ವಿಧಾನ ಸಭೆ ಚುನಾವಣೆಗೆ ನಿಂತು ಸೋತರೂ ಛಲಬಿಡದೆ ಸಮಾಜ ಸೇವೆಯಲ್ಲಿ ಮುಂದುವರಿದು ತಮ್ಮದೇ ಛಾಪು ಮೂಡಿಸಿದವರು, ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಇ‍ವರಿಗೆ ಪಕ್ಷವೂ ಒಂದು ಅವಧಿಗೆ ವಿಧಾನ ಪರಿಷತ್‌ ಸದಸ್ಯರನ್ನಾಗಿಸಿ ಸ್ಥಾನಮಾನ ಕಲ್ಪಿಸಿತ್ತು. ಪಕ್ಷಕ್ಕೆ, ಸಾಮಜಕ್ಕೆ ಮಾಲೆಯವರಂತೆ ಸ್ವಾರ್ಥ ಬದಿಗೊತ್ತಿ ಸೇವೆ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಡಾ. ಪರಮೇಶ್ವರ ಹೇಳಿದರು.

ನುಡಿ ನಮನದಲ್ಲಿ ಮತನಾಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್‌, ಮಾಲೆಯವರು ಸರಳತೆ, ಪ್ರಾಮಾಣಿಕತೆಯೊಂದಿಗೆ ಹೆಸರಾದವರು. ಸದ್ದಿಲ್ಲದೆ ತಮ್ಮ ಪಾಲಿನ ಕೆಲಸ ಮಾಡುತ್ತಿದ್ದರು. ತಾವು ಕಳೆದ 3 ದಶಕದಿಂದ ಮಾಲೆಯವರನ್ನು ಹತ್ತಿರದಿಂದ ಕಂಡಿದ್ದಾಗಿ ಹೇಳಿದರಲ್ಲದೆ ಅನರ ಸರಳತೆ ಇಂದಿನ ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್‌, ಎಂಎಲ್‌ಸಿ ತಿಪ್ಪಣ್ಣ ಕಮಕನೂರ್‌, ಕಲಬುರಗಿ ಉತ್ತರ ಶಾಸಕಿ ಖನೀಜಾ ಫಾತೀಮಾ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್‌, ಉದ್ಯಮಿ ಹಾಗೂ ಕಾಂಗ್ರೆಸ್‌ ಮುಖಂಡರಾಜ ರಾಧಾಕೃಷ್ಣ, ಕಾಂಗ್ರೆಸ್‌ ಅಸಂಘಟಿತ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಬಸಲಿಂಗ ಬಿರಾದಾರ್‌, ಕಾಂಗ್ರೆಸ್‌ ಯುವ ಮುಖಂಡರಾದ ಸುಭಾಸ ರಾಠೋಡ, ಮಾಜಿ ಸಚಿವ ರೇವು ನಾಯಕ ಬೆಳಮಗಿ ಹಾಗೂ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡಿದ್ದರು. ನಂತರ ಎಲ್ಲರೂ 2 ನಿಮಷಗಳ ಕಾಲ ಮಾನೌಚಟರಣೆ ಸಲ್ಲಿಸಿ ಅಗಲಿದ ಮುಖಂಡನ ಆತ್ಮಕ್ಕೆ ಶಾಂತಿ ಕೋರಿ ದೇವರಲ್ಲಿ ಪ್ರಾರ್ಥಿಸಿದರು.

ಹಡಗಿಲ್‌ ಹಾರುತಿ ಹೊಲದಲ್ಲಿ ಅಂತಿಮ ಸಂಸ್ಕಾರ: ಕಲಬುರಗಿಯ ಶಾಂತಿ ನಗರದಲ್ಲಿರುವ ನಿವಾಸದಲ್ಲಿ ಮಾಲೆಯವರ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ಬುಧವಾರ ಬೆಳಗ್ಗೆ ಇಡಲಾಗಿತ್ತು. ಮಾಲೆಯವರ ಮನೆಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಪರಮೇಶ್ವರ, ವೈದ್ಯ.ಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್‌, ಉದ್ಯಮಿ ರಾಧಾಕೃಷ್ಣ, ಶಾಸಕರಾದ ಅಲ್ಲಂಪ್ರಭು ಪಾಟೀಲ್‌, ತಿಪ್ಪಣ್ಣ ಕಮಕನೂರ್‌ ಅವರು ಗಿರೀಶ ಮಾಲೆ ಹಾಗೂ ಕುಟುಂಬ ಸದಸ್ಯರಿಂಗ ಸಾಂತ್ವನ ಹೇಳಿದರು. ಮಾಲೆ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಹಡಗಿಲ್‌ ಹಾರುತಿಯ ಅವರ ತೋಟದಲ್ಲಿ ನಡೆಯಿತು.