ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಹಿಡಕಲ್, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಯಿಂದ ಘಟಪ್ರಭಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಭಾನುವಾರ ಮೂಡಲಗಿ ತಾಲೂಕಿನ ಮಸಗುಪ್ಪಿ ಮತ್ತು ಪಟಗುಂದಿ ಗ್ರಾಮಗಳು ಜಲಾವೃತಗೊಂಡು ನಡಗಡ್ಡೆಗಳಾಗಿವೆ.ಗ್ರಾಮಗಳ ಸುತ್ತ ನೀರು ಆವರಿಸಿದ್ದು, ಮುಖ್ಯವಾಹಿಣಿಯಿಂದ ಸಂಪರ್ಕ ಕಡಿತಗೊಂಡಿವೆ. ಗ್ರಾಮಗಳ 500ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಪಟಗುಂದಿಯ ಜಡಿಸಿದ್ಧೇಶ್ವರ, ಹನುಮಂತ ದೇವಸ್ಥಾನ, ಲಕ್ಷ್ಮೀ ದೇವಿ, ಬಸವಣ್ಣ ದೇಗುಲಗಳು, ಸುಣಧೋಳಿಯ ಜಡಿಸಿದ್ಧೇಶ್ವರ ದೇವಸ್ಥಾನ, ಹುಣಶ್ಯಾಳ ಪಿವೈಯದ ಹನುಮಂತ ದೇವರು, ಮುನ್ಯಾಳ ಲಕ್ಷ್ಮೀ ದೇವಿ, ಕಮಲದಿನ್ನಿ ಲಕ್ಷ್ಮೀ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳ ಜಲಾವೃತಗೊಂಡಿವೆ. ತಾಲೂಕಿನಲ್ಲಿ ಮುಖ್ಯ ರಸ್ತೆಗಳು ಜಲಾವೃತಗೊಂಡಿದ್ದು, ನದಿ ದಡದ ಸಾವಿರಾರು ಎಕರೆ ಕಬ್ಬು, ಗೋವಿಜೋಳ. ತರಕಾರಿ ಬೆಳೆಗಳು ನೀರಲ್ಲಿ ಮುಳುಗಿವೆ.
ಈ ಗ್ರಾಮಗಳ ಜನ, ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದ್ದು, ತಾಲೂಕಾಡಳಿತ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಜನರು ಆಸರೆ ಪಡೆದಿದ್ದಾರೆ. ಮೂಡಲಗಿ ತಾಲೂಕು ಆಡಳಿತ ಆರಂಭಿಸಿದ ಕಾಳಜಿ ಕೇಂದ್ರದಲ್ಲಿ ಮೂಡಲಗಿ ತಾಲೂಕಿನ ಮಸಗುಪ್ಪಿ-1, ಹುಣಶ್ಯಾಳ ಪಿಜಿ-4, ವಡೇರಹಟ್ಟಿ-1, ಪಟಗುಂದಿ-1, ಮುನ್ಯಾಳ-1, ಹುಣಶ್ಯಾಳ ಪಿವೈ-1, ಸುಣಧೋಳಿ-1 ಧರ್ಮಟ್ಟಿ-1 ಒಟ್ಟು 12 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 319 ಸಂತ್ರಸ್ತ ಕುಟುಂಬದ 1198 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸುರಕ್ಷಿತವಾದ ಸ್ಥಳಗಳಿಗೆ ಹೋಗುವಂತೆ ಮತ್ತು ಕಾಳಜಿ ಕೇಮದ್ರದಲ್ಲಿ ಉಳಿಯಲು ಮನವಿ ಮಾಡಿಕೊಳ್ಳುತ್ತಿದ್ದಾರೆ.
ತಿಗಡಿ ಸೇತು ಜಲಾವೃತ, ಗ್ರಾಮದೊಳಗೆ ನುಗ್ಗಿದ ನೀರು:ಭಾನುವಾರ ತಾಲೂಕಿನ ತಿಗಡಿ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ. ನೀರು ತಿಗಡಿ ಗ್ರಾಮದೊಳಗೆ ಪ್ರವೇಶಿಸುತ್ತಿದ್ದು, ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸುಣಧೋಳಿ ಗ್ರಾಮದ ಕೆಲ ಪ್ರದೇಶಗಳು ಜಲಾವೃತಗೊಂಡಿವೆ. ಸುಣಧೋಳಿಯ ಜಡಿಸಿದ್ಧೇಶ್ವರ ತೋಟದ ಶಾಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಕಾಳಜಿ ಕೇಂದ್ರ ಆರಂಭಿಸಲಾಗಿದೆ.
ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ನದಿ ತೀರದ ಗ್ರಾಮಗಳಿಗೆ ಆಪ್ತ ಸಹಾಯಕ ಭಾಸ್ಕರ್ ರಾವ್ ಅವರು ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸುರಕ್ಷಿತವಾದ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡಿದರು.ಗ್ರಾಪಂ ಅಧ್ಯಕ್ಷ ಸಿದ್ದಪ್ಪ ದೇವರಮನಿ, ರಾಮಣ್ಣ ಬೆಣ್ಣೆ, ಸಿದ್ಧಾರೂಢ ಕಮತಿ, ಉದಯ ಜಿಡ್ಡಿಮನಿ, ನಾಗಪ್ಪ ಪಾಶಿ, ಅನಿಲ ಕಣಕಿಕೊಡಿ, ಪಿಡಿಒ ಗಂಗಾಧರ ಮಲ್ಹಾರಿ, ಗ್ರಾಮ ಆಡಳಿತ ಅಧಿಕಾರಿ ಎಂ.ಬಿ. ಶಿಗಿಹೊಳಿ, ಶಾಲೆಯ ಮುಖ್ಯಶಿಕ್ಷಕ ರವಿ ಹುಲಗನ್ನವರ, ಪುಂಡಲೀಕ ಬೆಣ್ಣಿ, ಬಿಸಿಯೂಟ ಕಾರ್ಯಕರ್ತೆಯರು ಉಪಸ್ಥಿತರಿದ್ದರು.