ಸಾರಾಂಶ
ದೇಶದ ವಿವಿಧ ಆಂಕೊಲಾಜಿ ವಿಭಾಗಗಳನ್ನು ಪ್ರತಿನಿಧಿಸುವ 120ಕ್ಕೂ ಹೆಚ್ಚು ಪ್ರತಿನಿಧಿಗಳು ‘ಮೆಸೊಕಾನ್ 2024 - ಮಣಿಪಾಲ ಶಸ್ತ್ರಚಿಕಿತ್ಸಾ ಆಂಕೊಲಾಜಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಆಯೋಜಿಸಿದ್ದ 2 ದಿನಗಳ ‘ಮೆಸೊಕಾನ್ 2024 - ಮಣಿಪಾಲ ಶಸ್ತ್ರಚಿಕಿತ್ಸಾ ಆಂಕೊಲಾಜಿ ಸಮ್ಮೇಳನ’ವು ಆಸ್ಪತ್ರೆಯ ಡಾ.ಟಿ.ಎಂ.ಎ.ಪೈ ಆಡಿಟೋರಿಯಂನಲ್ಲಿ ಆರಂಭವಾಯಿತು. ದೇಶದ ವಿವಿಧ ಆಂಕೊಲಾಜಿ ವಿಭಾಗಗಳನ್ನು ಪ್ರತಿನಿಧಿಸುವ 120ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತಿದ್ದಾರೆ.ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಉಪನಿರ್ದೇಶಕ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಡಾ. ಶೈಲೇಶ್ ವಿ. ಶ್ರೀಕಾಂಡೆ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಎಸ್.ಎಸ್., ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನವೀನಕುಮಾರ್ ಎ.ಎನ್. ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಘಟಕದ ಮುಖ್ಯಸ್ಥ ಡಾ. ನವಾಜ್ ಉಸ್ಮಾನ್, ಡಾ. ಪ್ರೀತಿ ಎಸ್. ಶೆಟ್ಟಿ ಭಾಗವಹಿಸಿದ್ದರು.
ಡಾ. ಶ್ರೀಕಾಂಡೆ ಮಾತನಾಡಿ, ಆಂಕೊಲಾಜಿ ಶಸ್ತ್ರಚಿಕಿತ್ಸಕರು ಮುಂದುವರಿದ ಶಿಕ್ಷಣ, ಕಲಿಕೆ ಮತ್ತು ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡಬೇಕು, ಈ ನಮ್ಮೇಳನ ಈ ಅಂಶಗಳ ಹೆಚ್ಚಿನ ಗಮನಕ್ಕೆ ಅರ್ಹವಾಗಿವೆ ಎಂದು ಹೇಳಿದರು.ಡಾ. ಶ್ರೀಕಾಂಡೆ, ಡಾ. ಶಲಾಕಾ ಪಿ.ಜೋಶಿ, ಡಾ.ಮನೀಷ್ ಭಂಡಾರೆ, ಡಾ.ಶಿವಕುಮಾರ್ ತ್ಯಾಗರಾಜನ್, ಡಾ.ನವೀನ ಕುಮಾರ್ ಎ.ಎನ್. ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಸಮ್ಮೇಳನದ ಸಮಯದಲ್ಲಿ ನೇರಪ್ರಸಾರದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಈ ಪ್ರದರ್ಶನಗಳು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು ಕ್ಷೇತ್ರದಲ್ಲಿನ ಪ್ರಗತಿಗಳ ಬಗ್ಗೆ ಸಮ್ಮೇಳಮದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ಅಮೂಲ್ಯವಾದ ಮಾಹಿತಿಯನ್ನು ನೀಡಿತು.