ಸಾರಾಂಶ
ಮಾಸ್ ಸಂಸ್ಥೆಯ ಮೂಲಕ ಅಡಕೆ ಖರೀದಿ ಹಾಗೂ ಮಾರಾಟ ದ್ವಿಗುಣ ಮಾಡುವ ಗುರಿ ಇಟ್ಟಿಕೊಂಡಿದ್ದೇವೆ. ಸಂಘದ ಲಾಭಾಂಶ ಹೆಚ್ಚಿಸಲು ಸರಕಾರದಿಂದ ೫ ಕೋಟಿ ಷೇರು ಬಂಡವಾಳಕ್ಕೆ ಮನವಿ ಮಾಡಿದ್ದೇವೆ ಎಂದು ಮಂಗಳೂರು ಕೃಷಿಕರ ಸಹಕಾರ ಸಂಘ (ಮಾಸ್)ನ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಮಾಸ್ ಸಂಸ್ಥೆಯ ಮೂಲಕ ಅಡಕೆ ಖರೀದಿ ಹಾಗೂ ಮಾರಾಟ ದ್ವಿಗುಣ ಮಾಡುವ ಗುರಿ ಇಟ್ಟಿಕೊಂಡಿದ್ದೇವೆ. ಸಂಘದ ಲಾಭಾಂಶ ಹೆಚ್ಚಿಸಲು ಸರಕಾರದಿಂದ ೫ ಕೋಟಿ ಷೇರು ಬಂಡವಾಳಕ್ಕೆ ಮನವಿ ಮಾಡಿದ್ದೇವೆ ಎಂದು ಮಂಗಳೂರು ಕೃಷಿಕರ ಸಹಕಾರ ಸಂಘ (ಮಾಸ್)ನ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಹೇಳಿದ್ದಾರೆ.ಬೈಕಂಪಾಡಿಯ ಎಪಿಎಂಸಿ ಆವರಣದ ಮಾಸ್ ಕೇಂದ್ರ ಕಚೇರಿಯಲ್ಲಿ ನಡೆದ ಮಂಗಳೂರು ಕೃಷಿಕರ ಸಹಕಾರಿ ಸಂಘ (ಮಾಸ್)ನ ೨೦೨೩-೨೪ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಡಿಕೆ ಖರೀದಿ ಕೇಂದ್ರಗಳು ಅಲ್ಲಲ್ಲಿ ಬೇಕೆಂದು ಬೇಡಿಕೆ ಬರುತ್ತಿದೆ.ಹಾಗಾಗಿ ಈಗಾಗಲೇ ಕಾವಿನಲ್ಲಿ ಅಡಿಕೆ ಖರೀದಿ ಕೇಂದ್ರ ಆಗಿದೆ. ಮುಂದೆ ಒಂದೂವರೆ ತಿಂಗಳಲ್ಲಿ ನಿಂತಿಕಲ್ಲಿನಲ್ಲಿ ಶಾಖೆ ಆರಂಭ ಆಗಲಿದೆ. ಸುಳ್ಯ, ಸಂಪಾಜೆಯಲ್ಲಿ ತೆಗೆದ ಆಡಿಕೆಯನ್ನು ಸಂಸ್ಕರಣೆ ಮಾಡಲು ಬೈಕಂಪಾಡಿಗೆ ತರುವುದು ಹೆಚ್ಚಿನ ಖರ್ಚಾಗುವುದರಿಂದ ಸುಳ್ಯ ಎಪಿಎಂಸಿಯಲ್ಲಿ ಸಂಸ್ಕರಣೆ(ಗಾರ್ಬಲಿಂಗ್) ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಸಂಸ್ಥೆಯಲ್ಲಿ ೫,೭೭೩ ಮಂದಿ ಸದಸ್ಯರು, ೬೪ ಮಂದಿ ಸಹಕಾರಿ ಸಂಘಗಳ ಸದಸ್ಯರಿದ್ದಾರೆ. ರು.೨,೧೪,೩೦,೦೦೦ ಷೇರು ಹಣ ಇದೆ. ೨೦೨೩-೨೪ ನೇ ಸಾಲಿಗೆ ರೂ.೧೨,೪೦,೫೦೦ ಲಾಭ ಬಂದಿದೆ. ಲಾಭವನ್ನು ಸಹಕಾರ ಉಪನಿಬಂಧನೆಗಳ ಪ್ರಕಾರ ಹಂಚಿ ಲಾಭಾಂಶ ಮೀಸಲು ನಿಧಿಗೆ ಇಟ್ಟು ಮುಂದಿನ ದಿನ ಸದಸ್ಯರಿಗೆ ಡಿವಿಡೆಂಡ್ ನೀಡುವುದಾಗಿ ಭರವಸೆ ನೀಡಿದರು. ಸದಸ್ಯರಾದ ಲಕ್ಷ್ಮೀಶ ಗಬ್ಲಡ್ಕ, ಬಾಲಚಂದ್ರ, ರಾಕೇಶ್ ರೈ ಕೆಡೆಂಜಿ ಮತ್ತಿತರರು ಸಲಹೆಗಳನ್ನು ನೀಡಿದರು. ಮಾಸ್ ಸಹಯೋಗದೊಂದಿಗೆ ಅಡಕೆ ಖರೀದಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ ಸವಣೂರು, ಕಾವು, ಮಾನಂಜಿ ಸಹಕಾರ ಸಂಘಗಳನ್ನು ಸನ್ಮಾನಿಸಲಾಯಿತು.
ಮಾಸ್‌ನ ಕಚೇರಿ ಸಹಾಯಕ ಹರೀಶ್ ಕೆ. ೨೦೨೩-೨೪ನೇ ಸಾಲಿನ ಮಹಾಸಭೆಯ ತಿಳಿವಳಿಕೆ ಪತ್ರ, ೨೦೨೪-೨೫ನೇ ಸಾಲಿನ ಅಂದಾಜು ಆಯ ಮತ್ತು ವ್ಯಯ ಸಹಿತ ವಿಚಾರ ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಮಹಾಬಲೇಶ್ವರ ಭಟ್ ವಾರ್ಷಿಕ ಮಹಾಸಭೆಯ ನಡಾವಳಿಯನ್ನು ಓದಿ ದಾಖಲಿಸಿದರು. ಶಾಖಾ ಮ್ಯಾನೇಜರ್ ಚೇತನ್ ಪ್ರಕಾಶ್ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಮಾಸ್ ಉಪಾಧ್ಯಕ್ಷ ಪ್ರದೀಪ್ ಯಡಿಯಾಳ, ನಿರ್ದೇಶಕರಾದ ಟಿ.ಜಿ ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಶ್ರೀಧರ ಜಿ.ಭಿಡೆ, ಎಂ.ಬಿ.ನಿತ್ಯಾನಂದ ಮುಂಡೋಡಿ, ಮೋನಪ್ಪ ಶೆಟ್ಟಿ ಎಕ್ಕಾರು, ಶಿವಾಜಿ ಎಸ್. ಸುವರ್ಣ, ಆಶೋಕ್ ಕುಮಾರ್ ಬಲ್ಲಾಳ್, ರಾಜೀವಿ ಆರ್. ರೈ, ಸುಧಾ ಎಸ್. ರೈ, ನಾರಾಯಣ ನಾಯ್ಕ, ಟಿ. ರಾಘವ ಶೆಟ್ಟಿ, ಪಿ.ರಾಜಾರಾಮ ಶೆಟ್ಟಿ, ಸತೀಶ್ ಕೆ., ಪುಷ್ಪರಾಜ ಅಡ್ಯಂತಾಯ, ನಾಗಪ್ಪ ಪೂಜಾರಿ ಇದ್ದರು.ಪ್ರದೀಪ್ ಯಡಿಯಾಳ್ ಸ್ವಾಗತಿಸಿದರು. ನಿರ್ದೇಶಕ ಶಿವಾಜಿ ಎಸ್. ಸುವರ್ಣ ವಂದಿಸಿದರು.