ಬಣ್ಣಾರಿ ಮಾರಿಯಮ್ಮ ದೇವಸ್ಥಾನದ 80ನೇ ವರ್ಷದ ವಾರ್ಷಿಕೋತ್ಸವದ

| Published : Apr 24 2025, 12:31 AM IST

ಬಣ್ಣಾರಿ ಮಾರಿಯಮ್ಮ ದೇವಸ್ಥಾನದ 80ನೇ ವರ್ಷದ ವಾರ್ಷಿಕೋತ್ಸವದ
Share this Article
  • FB
  • TW
  • Linkdin
  • Email

ಸಾರಾಂಶ

ಬಾಯಿ ಬೀಗ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕ, ಯುವತಿಯರು, ಗೃಹಿಣಿಯರು ಹಾಗು ಮಂಗಳ ಮುಖಿಯರು ಸೇರಿದಂತೆ ಸುಮಾರು 600ಕ್ಕೂ ಚ್ಚು ಮಂದಿ ಬಾಯಿಗೆ ಬೀಗ ಹಾಕಿಸಿಕೊಂಡು

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಶ್ರೀ ಬಣ್ಣಾರಿ ಮಾರಿಯಮ್ಮ ದೇವಸ್ಥಾನದ 80ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ನಡೆದ ಸಾಮೂಹಿಕ ಬಾಯಿ ಬೀಗ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯುವುದರ ಜೊತೆಗೆ ನೋಡುಗರ ಮೈ ನವಿರೇಳುವಂತೆ ಮಾಡಿತು.

ಪಟ್ಟಣದ ಕೊಳ್ಳೇಗಾಲ-ಚಾಮರಾಜನಗರ ರಸ್ತೆಯಲ್ಲಿರುವ ಶ್ರೀ ಬಣ್ಣಾರಿ ಮಾರಿಯಮ್ಮನವರ ದೇವಸ್ಥಾನದ ಟ್ರಸ್ಟ್ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಭಾನುವಾರದಿಂದಲೇ ಚಾಲನೆ ನೀಡಲಾಗಿದ್ದು, ವಿವಿಧ ಧಾರ್ಮಿಕ, ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಧಾರ್ಮಿಕ ಕಾರ್ಯಕ್ರಮದ ಮುಖ್ಯ ಭಾಗವಾಗಿ ಬುಧವಾರ ಬೆಳಗ್ಗೆ ಸಾಮೂಹಿಕ ಬಾಯಿ ಬೀಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಾಯಿ ಬೀಗ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕ, ಯುವತಿಯರು, ಗೃಹಿಣಿಯರು ಹಾಗು ಮಂಗಳ ಮುಖಿಯರು ಸೇರಿದಂತೆ ಸುಮಾರು 600ಕ್ಕೂ ಚ್ಚು ಮಂದಿ ಬಾಯಿಗೆ ಬೀಗ ಹಾಕಿಸಿಕೊಂಡು ದೇವಿಗೆ ತಮ್ಮ ಹರಕೆ ತೀರಿಸಿದರು.

ಸುಮಾರು 3 ಅಡಿಯಿಂದ 10 ಅಡಿ ಉದ್ದದ ಕಬ್ಬಿಣದ ಸರಳುಗಳಿಂದ ತಯಾರಿಸಲಾದ ಚೂಪಾದ ತ್ರಿಶೂಲಾಕಾರಾದ ಬಾಯಿಬೀಗವನ್ನು ಭಕ್ತಾದಿಗಳಿಗೆ ಹಾಕಲಾಯಿತು. ಬಾಯಿ ಬೀಗ ಹಾಕಿಸಿಕೊಂಡ ಭಕ್ತಾದಿಗಳ ಮೆರವಣಿಗೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಬಣ್ಣಾರಿ ಮಾರಿಯಮ್ಮನವರ ದೇವಸ್ಥಾನ ತಲುಪಿತು.

ಬಾಯಿ ಬೀಗ ಕಾರ್ಯಕ್ರಮದ ಮೆರವಣಿಗೆಯನ್ನು ವೀಕ್ಷಿಸಲು ರಸ್ತೆಯ

ಇಕ್ಕೆಲಗಳಲ್ಲಿ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಬೆಳಗ್ಗೆ 6 ರಿಂದಲೇ ಪಟ್ಟಣದ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಬಾಯಿ ಬೀಗ ಹಾಕಿಸಿಕೊಂಡರು.

ತಮಿಳುನಾಡಿನಿಂದ ಬಂದಿದ್ದ ಬಾಯಿ ಬೀಗ ಹಾಕುವ ಗುರುಗಳ ಸಹಕಾರದಿಂದ ಹರಕೆ ಹೊತ್ತ ಭಕ್ತಾದಿಗಳಿಗೆ ಬಣ್ಣಾರಿ ಮಾರಿ ಯಮ್ಮ ದೇವಸ್ಥಾನದ ಟ್ರಸ್ಟ್ ಸದಸ್ಯರು ಬಾಯಿ ಬೀಗ ಹಾಕುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದು ವಿಶೇಷವಾಗಿತ್ತು.

ತ್ರಿಶೂಲಾಕಾರದ ಸರಳನ್ನು ಭಕ್ತಾದಿಗಳ ಒಂದು ಕೆನ್ನೆಯಿಂದ ಚುಚ್ಚಿ ಮತ್ತೊಂದು ಕೆನ್ನೆಯಿಂದ ಹೊರಕ್ಕೆ ತೆಗೆಯುತ್ತಿದ್ದರೆ, ಇದನ್ನು ನೋಡಲಾಗದ ಭಕ್ತಾದಿಗಳು ಭಯದಿಂದ ಕಣ್ಣು ಮುಚ್ಚಿಕೊಂಡರೆ, ಮತ್ತೆ ಕೆಲವು ಭಕ್ತಾದಿಗಳು ಬೆರಗು ಗಣ್ಣಿನಿಂದ ಚಕಿತರಾಗಿ ನೋಡುತ್ತಾ ನಿಂತಿದ್ದ ದೃಶ್ಯ ಕಂಡು ಬಂತು. ಕಬ್ಬಿಣದ ಸರಳನ್ನು ಒಂದು ಕೆನ್ನೆಯಿಂದ ಚುಚ್ಚಿ ಮತ್ತೊಂದು ಕೆನ್ನೆಯಿಂದ ಹೊರತೆಗೆದರೂ ಕೂಡ ಒಂದೇ ಒಂದು ತೊಟ್ಟು ರಕ್ತ ಸಹ ಹೊರಗೆ ಬಾರದಿರುವುದು ಅಚ್ಚರಿ ಮೂಡಿಸಿತು.

ದೇವಸ್ಥಾನದ ವಾರ್ಷಿಕೋತ್ಸವದ ಹಿನ್ನೆಲೆ ಮಂಗಳವಾರ ಮುಂಜಾನೆ ನಡೆದ ಕೊಂಡೋತ್ಸವ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಕೊಂಡ ಹಾಯುವ ಮೂಲಕ ಹರಕೆ ತೀರಿಸಿದರು.

ಬಣ್ಣಾರಿ ಮಾರಿಯಮ್ಮ ಟ್ರಸ್ಟ್ ನ ಅಧ್ಯಕ್ಷ ಮಂಜುನಾಥ್, ರಾಜಶೇಖರ್, ಬಾಬು, ಮೋಹನ್, ಅರ್ಚಕರಾದ ಮಂಜುನಾಥ್, ರಾಜು ವಾಸುದೇವ್, ಸುರೇಶ್, ಶೇಖರ್ ಇದ್ದರು.