ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ : ಸಾಮೂಹಿಕ ಕೋಳಿ ಹತ್ಯೆ

| N/A | Published : Mar 02 2025, 01:18 AM IST / Updated: Mar 02 2025, 10:58 AM IST

ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ : ಸಾಮೂಹಿಕ ಕೋಳಿ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಮುಂಜಾಗ್ರತಾ ಕ್ರಮವಾಗಿ ವರದಹಳ್ಳಿ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಎಚ್5 ಎನ್1 ವೈರಸ್ ಸೋಂಕು ಶಂಕಿತ 442 ನಾಟಿ ಕೋಳಿಗಳನ್ನು ನಾಶಪಡಿಸಿ ವಿಲೇವಾರಿ ಮಾಡಿದೆ.

  ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಮುಂಜಾಗ್ರತಾ ಕ್ರಮವಾಗಿ ವರದಹಳ್ಳಿ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಎಚ್5 ಎನ್1 ವೈರಸ್ ಸೋಂಕು ಶಂಕಿತ 442 ನಾಟಿ ಕೋಳಿಗಳನ್ನು ನಾಶಪಡಿಸಿ ವಿಲೇವಾರಿ ಮಾಡಿದೆ.

ಗ್ರಾಮದ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಸಾಕಾಣಿಕೆ ಮೇಲೆ ನಿರ್ಬಂಧ ಹೇರಲಾಗಿದೆ. ಹೊರಗಡೆಯಿಂದ ವರದಹಳ್ಳಿ ಸುತ್ತಮುತ್ತಲಿನ ಗ್ರಾಮಗಳಿಗೆ ಕೋಳಿಗಳನ್ನು ತರದಂತೆ ನಾಕಾಬಂಧಿ ಹಾಕಲಾಗಿದೆ. ರೋಗ ನಿಯಂತ್ರಣದ ಮುಂಜಾಗ್ರತಾ ಕ್ರಮದ ಭಾಗವಾಗಿ ಸರ್ಕಾರದ ಮಾರ್ಗಸೂಚಿಯಂತೆ ಕೋಳಿಗಳ ಸಾಮೂಹಿಕ ಹತ್ಯೆ ನಡೆಸಲಾಗಿದೆ. ಇದುವರೆಗೆ ಗ್ರಾಮದ ಜನರಲ್ಲಿ ಯಾವುದೇ ಕೆಮ್ಮು, ಶೀತ, ನೆಗಡಿ, ಜ್ವರದಂತಹ ಪ್ರಕರಣಗಳು ಕಂಡು ಬಂದಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ 8000 ಕೋಳಿ ಸಾವು:

ಈ ಮಧ್ಯೆ, ಬಳ್ಳಾರಿ ಜಿಲ್ಲೆ ಕುರೆಕುಪ್ಪ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದಲ್ಲಿ ಹಕ್ಕಿಜ್ವರಕ್ಕೆ 2 ಸಾವಿರ ಕೋಳಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ಕೋಳಿ ಫಾರಂನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರ ಬೆನ್ನಲ್ಲೇ ಇದೀಗ ಬಳ್ಳಾರಿ ತಾಲೂಕು ಕಪ್ಪಗಲ್ಲು ಗ್ರಾಮದಲ್ಲಿನ ಖಾಸಗಿ ಫಾರ್ಮ್‌ನಲ್ಲಿ ಕಳೆದ ಮೂರು ದಿನಗಳಲ್ಲಿ 8 ಸಾವಿರ ಕೋಳಿಗಳು ಮೃತಪಟ್ಟಿವೆ. ಮೇಲ್ನೋಟಕ್ಕೆ ಹಕ್ಕಿಜ್ವರ ಎಂಬ ಅನುಮಾನ ವ್ಯಕ್ತವಾಗಿದ್ದು, ವೈಜ್ಞಾನಿಕ ಪದ್ಧತಿಯಲ್ಲಿ ಗುಂಡಿ ಅಗೆದು ಸತ್ತ ಕೋಳಿಗಳನ್ನು ಹಾಕಿ ಮುಚ್ಚಲಾಗಿದೆ.

ಹಕ್ಕಿಗಳ ಕಳೆಬರದ ಮಾದರಿಗಳನ್ನು ಮಧ್ಯಪ್ರದೇಶದ ಭೋಪಾಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯುರಿಟಿ ಅನಿಮಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ ನಾಯಕ್ ಕಾರ್‌ಬಾರಿ ತಿಳಿಸಿದ್ದಾರೆ.