ಅದ್ಧೂರಿ ಮೆರವಣಿಗೆಯೊಂದಿಗೆ ಸಾಮೂಹಿಕವಾಗಿ ಗಣೇಶ ಮೂರ್ತಿ ವಿಸರ್ಜನೆ

| Published : Sep 12 2024, 01:48 AM IST

ಸಾರಾಂಶ

ಮೆರವಣಿಗೆಯಲ್ಲಿ ಬೃಹತ್ ಹಾಗೂ ಸುಂದರ, ವಿಭಿನ್ನ ಗಣೇಶ ಮೂರ್ತಿಗಳು ನೋಡುಗರ ಕಣ್ಮನ ಸೆಳೆದವು.

ಕನ್ನಡಪ್ರಭ ವಾರ್ತೆ ಮೈಸೂರುಹಿಂದೂ ಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘ- ಸಂಸ್ಥೆಗಳು ಬುಧವಾರ ಆಯೋಜಿಸಿದ್ದ ಸಾಮೂಹಿಕ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಸಾವಿರಾರು ಗಣಪತಿಗಳನ್ನು ಒಂದೇ ಬಾರಿಗೆ ವಿಸರ್ಜಿಸಲಾಯಿತು.ನಗರದಾದ್ಯಂತ ಪ್ರತಿಷ್ಠಾಪಿಸಿದ್ದ ಗೌರಿ- ಗಣೇಶ ಮೂರ್ತಿಗಳನ್ನು ಭವ್ಯ ಮೆರವಣಿಗೆ ಮೂಲಕ ಸಾಮೂಹಿಕವಾಗಿ ವಿಸರ್ಜಿಸಲಾಯಿತು.ನಗರದ ವಿವಿಧ ಬಡಾವಣೆಗಳಿಂದ ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಾಹನಗಳಲ್ಲಿ ಮೆರವಣಿಗೆ ನಡೆಸಿದ ಸಂಘಟನೆಗಳು, ಕೊನೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜಮಾಯಿಸಿದವು. ಸಾವಿರಾರು ಜನರು ಈ ವೇಳೆ ಜಮಾವಣೆಗೊಂಡ ಹಿನ್ನೆಲೆಯಲ್ಲಿ ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಮೆರವಣಿಗೆಯಲ್ಲಿ ಬೃಹತ್ ಹಾಗೂ ಸುಂದರ, ವಿಭಿನ್ನ ಗಣೇಶ ಮೂರ್ತಿಗಳು ನೋಡುಗರ ಕಣ್ಮನ ಸೆಳೆದವು.ಗಣೇಶ ವಿಸರ್ಜನೆ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವೃತ್ತಗಳಲ್ಲಿ ಭಗವಾಧ್ವಜ ರಾರಾಜಿಸಿತು. ವೀರನಗೆರೆಯಿಂದ ಆರಂಭವಾದ ಭವ್ಯ ಮೆರವಣಿಗೆ ಅಶೋಕ ರಸ್ತೆ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ತಲುಪಿತು. ಗಣೇಶನ ಮೂರ್ತಿ ಮೆರವಣಿಗೆಯಲ್ಲಿ ಕೇಸರಿ ಧ್ವಜ ರಾರಾಜಿಸಿತು. ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಬಂದು ಸೇರಿದ ಎಲ್ಲಾ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ವೀರಗಾಸೆ, ನಾದಸ್ವರ, ತಮಟೆ, ಡೊಳ್ಳು ಮುಂತಾದ ಜಾನಪದ ಕಲಾ ತಂಡಗಳು ಮತ್ತು ಯುವಕರ ನೃತ್ಯ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಕೊನೆಗೆ ಶ್ರೀರಂಗಪಟ್ಟಣ್ಣದ ಕಾವೇರಿ ನದಿಯಲ್ಲಿ ಎಲ್ಲಾ ಮೂರ್ತಿಗಳನ್ನು ವಿಸರ್ಜಿಸಲಾಯಿತು.ಈ ವರ್ಷದ ಗಣೇಶ ಚತುರ್ಥಿಯ ಅಂಗವಾಗಿ ಸುಮಾರು ಐದು ದಿನಗಳ ಕಾಲ ಗೌರಿ- ಗಣೇಶನನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ, ಐದು ದಿನಗಳು ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಬುಧವಾರ ಪ್ರಮುಖ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ರಾಮಸ್ವಾಮಿ ವೃತ್ತ, ಸಿದ್ದಪ್ಪ ವೃತ್ತ, ಅಗ್ರಹಾರ ಹಾಗೂ ಕೋಟೆ ಆಂಜನೇಯ ದೇವಸ್ಥಾನ ಆವರಣಗಳು ಕೇಸರಿ ಭಾಗವ ಧ್ವಜಗಳೊಂದಿಗೆ ಕಂಗೊಳಿಸುತ್ತಿದ್ದವು. ಬೃಹತ್ ಮೆರವಣಿಗೆಯುದ್ದಕ್ಕೂ ಗಣಪತಿ ಬಪ್ಪಾ ಮೋರಯ, ಮಂಗಳ ಮೂರ್ತಿ ಮೋರಯ ಎಂಬ ಘೋಷಣೆ ಮೊಳಗಿತು.ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ಅಲ್ಪಸಂಖ್ಯಾತರ ಮರ್ಚಾ ಅಧ್ಯಕ್ಷ ಡಾ. ಅನಿಲ್ ಥಾಮಸ್, ಬಿಜೆಪಿ ಮುಖಂಡರಾದ ಗಿರೀಧರ್, ಸು. ಮುರುಳಿ, ಜೋಗಿ ಮಂಜು, ಮಹೇಶ್ ಮೊದಲಾದವರು ಇದ್ದರು.ಬಿಗಿ ಪೊಲೀಸ್ ಬಂದೋಬಸ್ತ್ಗಣೇಶನ ಸಾಮೂಹಿಕ ವಿಸರ್ಜನೆ ಮತ್ತು ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಶೋಕ ರಸ್ತೆ, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.