ಇಂದು ನಾಗಮಂಗಲ ಪಟ್ಟಣದಲ್ಲಿ ಸಾಮೂಹಿಕ ಗಣೇಶ ಮೆರವಣಿಗೆ, ವಿಸರ್ಜನೆ

| Published : Sep 04 2025, 01:00 AM IST

ಇಂದು ನಾಗಮಂಗಲ ಪಟ್ಟಣದಲ್ಲಿ ಸಾಮೂಹಿಕ ಗಣೇಶ ಮೆರವಣಿಗೆ, ವಿಸರ್ಜನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ಪಟ್ಟಣದಲ್ಲಿ ಸೆ.4ರಂದು ಸಾಮೂಹಿಕ ಗಣೇಶ ಮೆರವಣಿಗೆ ಮತ್ತು ವಿಸರ್ಜನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಸಾಮೂಹಿಕ ಗಣೇಶ ವಿಸರ್ಜನಾ ಸಮಿತಿ ಮುಖ್ಯಸ್ಥರ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದಲ್ಲಿ ಸೆ.4ರಂದು ಸಾಮೂಹಿಕ ಗಣೇಶ ಮೆರವಣಿಗೆ ಮತ್ತು ವಿಸರ್ಜನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಸಾಮೂಹಿಕ ಗಣೇಶ ವಿಸರ್ಜನಾ ಸಮಿತಿ ಮುಖ್ಯಸ್ಥರ ಸಭೆ ನಡೆಸಿದರು.

ಡೀಸಿ ಡಾ.ಕುಮಾರ ಮಾತನಾಡಿ, ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಒಟ್ಟಾಗಿ ಸೇರಿ 11 ಗಣೇಶ ಮೂರ್ತಿಗಳನ್ನು ಏಕ ಕಾಲದಲ್ಲಿ ಸಾಮೂಹಿಕವಾಗಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡುತ್ತಿರುವುದು ಜಿಲ್ಲೆಯಲ್ಲಿಯೇ ಮೊದಲ ವಿಶೇಷ ಮತ್ತು ವಿನೂತನವಾಗಿದೆ.

ಕಳೆದ ವರ್ಷ ಪಟ್ಟಣದಲ್ಲಿ ಗಣೇಶಮೂರ್ತಿ ಮೆರವಣಿಗೆ ವೇಳೆ ಉಂಟಾದ ಘಟನೆಯಿಂದಾಗಿ ನಾಗಮಂಗಲ ಸೂಕ್ಷ್ಮ ಪ್ರದೇಶವೆಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದರು.

ಸಂಘಟಕರ ಬೇಡಿಕೆಗಳಿಗನುಸಾರವಾಗಿ ಅಗತ್ಯ ಸಲಹೆ ನೀಡುವ ಜೊತೆಗೆ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ನೀಡಲಾಗುತ್ತಿದೆ. ಸಂಘಟಕರು ತಿಳಿಸಿರುವಂತೆ ಮೆರವಣಿಗೆಯಲ್ಲಿ ಹಲವು ಜಾನಪದ ಕಲಾತಂಡಗಳು, 200ಕ್ಕೂ ಹೆಚ್ಚು ಮಂದಿ ಪುರೋಹಿತರು ಸೇರಿದಂತೆ ಹೆಚ್ಚು ಜನರು ಪಾಲ್ಗೊಳ್ಳುವರೆಂದು ತಿಳಿದುಬಂದಿದೆ ಎಂದರು.

ಯಾವುದೇ ಕೋಮು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಶಾಂತಿಯುತವಾಗಿ ಗಣೇಶ ಮೆರವಣಿಗೆ ಮತ್ತು ವಿಸರ್ಜನೆ ನಡೆಸಲು ಸಾಕಷ್ಟು ರೀತಿಯಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಿ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಗಣೇಶ ಮೂರ್ತಿ ವಿಸರ್ಜನೆ ಮಾಡುವ ಹಂಪೆ ಅರಸನ ಕೊಳದ ಸುತ್ತಮುತ್ತ ಬೆಳಕಿನ ವ್ಯವಸ್ಥೆಗಾಗಿ ಅಗತ್ಯ ಫೋಕಸ್ ಲೈಟ್‌ಗಳನ್ನು ಅಳವಡಿಸಲು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ. ಆ್ಯಂಬುಲೆನ್ಸ್, ನುರಿತ ಈಜುಪಟುಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕೊಳದ ಬಳಿ ನಿಯೋಜಿಸುವಂತೆ ನಿರ್ದೇಶಿಸಲಾಗಿದೆ ಎಂದರು.

ಆದರೆ, ಪಟ್ಟಣ ವ್ಯಾಪ್ತಿ ಯಾವುದೇ ಶಾಲೆ ಕಾಲೇಜುಗಳಿಗೆ ರಜೆ ಇಲ್ಲ. ಎಂದಿನಂತೆ ಎಲ್ಲಾ ಶಾಲಾ ಕಾಲೇಜುಗಳು ನಡೆಯುತ್ತವೆ ಎಂದರು.

ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಪಟ್ಟಣದ ಟಿ.ಬಿ.ಬಡಾವಣೆ ಬಿಜಿಎಸ್ ವೃತ್ತದಿಂದ ಮಧ್ಯಾಹ್ನ ಸಾಮೂಹಿಕ ಗಣೇಶ ಮೆರವಣಿಗೆ ಆರಂಭಗೊಂಡು ರಾತ್ರಿ ಸುಮಾರು 8 ಗಂಟೆಗೆ ಮುಕ್ತಾಯಗೊಂಡು ನಂತರ ಹಂಪೆ ಅರಸನ ಕೊಳದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ನಡೆಯಲಿದೆ. ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದರು.

ಬಂದೋಬಸ್ತ್‌ಗಾಗಿ ಒಬ್ಬರು ಎಸ್ಪಿ, ಇಬ್ಬರು ಎಎಸ್‌ಪಿ, 6 ಮಂದಿ ಡಿವೈಎಸ್ಪಿ, 25 ಮಂದಿ ಸಿಪಿಐ, 50 ಮಂದಿ ಪಿಎಸ್‌ಐ, 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 100 ಮಂದಿ ಗೃಹ ರಕ್ಷಕದಳದ ಸಿಬ್ಬಂದಿ, 3 ಕೆಎಸ್‌ಆರ್‌ಪಿ ತುಕಡಿ, 8 ಡಿಆರ್ ವಾಹನ, 3 ಕ್ಯೂಆರ್‌ಟಿ ತಂಡ ಮತ್ತು 2 ಡ್ರೋನ್ ಕ್ಯಾಮೆರಾ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಡಿವೈಎಸ್ಪಿ ಬಿ.ಚಲುವರಾಜು, ತಹಸೀಲ್ದಾರ್ ಜಿ.ಆದರ್ಶ, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ಸೇರಿದಂತೆ ವಿಸರ್ಜನಾ ಸಮಿತಿ ಮುಖ್ಯಸ್ಥರಾದ ಪುಣ್ಯಕೋಟಿ ರಘು, ಚೇತನ್, ಕೋದಂಡರಾಮು, ಶ್ರೀನಿವಾಸ್, ವಸಂತಕುಮಾರ್ ಸೇರಿದಂತೆ ಹಲವರು ಇದ್ದರು.ಮದ್ಯ ಮಾರಾಟ ನಿಷೇಧ

ಸಾಮೂಹಿಕ ಗಣೇಶ ಮೆರವಣಿಗೆ ಮತ್ತು ವಿಸರ್ಜನೆ ಹಿನ್ನೆಲೆಯಲ್ಲಿ ಪಟ್ಟಣವು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆ.4ರ ಬೆಳಗ್ಗೆ 6 ರಿಂದ ಸೆ.5ರ ಬೆಳಗ್ಗೆ 6ಗಂಟೆ ವರೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ 10ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾದರಿಯ ಮದ್ಯದ ಅಂಗಡಿಗಳು, ಬಾರ್‌ಗಳನ್ನು ಮುಚ್ಚಲು ಮತ್ತು ಎಲ್ಲಾ ಬಗೆಯ ಮದ್ಯ ಮಾರಾಟ, ಸಾಗಾಟ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.