ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಗೌರಿ- ಗಣೇಶ ಹಬ್ಬದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ- ಗಣೇಶ ಮೂರ್ತಿಗಳನ್ನು ಭಾನುವಾರ ಸಂಜೆ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಸಾಮೂಹಿಕ ವಿಸರ್ಜನೆ ಮಾಡಲಾಯಿತು.ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿ ನೇತೃತ್ವದಲ್ಲಿ ನಗರದ ವಿವಿಧ ಬಡಾವಣೆಗಳಿಂದ ಗಣೇಶ ಮೂರ್ತಿಗಳನ್ನು ವಾಹನಗಳಲ್ಲಿ ಮೆರವಣಿಗೆ ಮೂಲಕ ತಂದ ಭಕ್ತರು, ವೀರನಗೆರೆ ವಿದ್ಯಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಸಾಲುಗಟ್ಟಿ ನಿಂತವು. ಅರ್ಚಕ ಪ್ರಹ್ಲಾದ್ ರಾವ್ ಅವರು, ದೇವರಿಗೆ ಪಂಚಾಮೃತ ಅಭಿಷೇಕ, 108 ಮೋದಕಗಳ ಹೋಮ ನೆರವೇರಿಸಿದರು. ಬಳಿಕ ಎಲ್ಲಾ ಮೂರ್ತಿಗಳಿಗೂ ಪೂಜೆ ಸಲ್ಲಿಸಿದರು.
ನಗರದ ವಿವಿಧೆಡೆ ಹಿಂದೂ ಸಂಘಟನೆಗಳು ಪೂಜಿಸಿದ 40 ಅಧಿಕ ಮೂರ್ತಿಗಳನ್ನು ವಾಹನಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಂಸಾಳೆ, ವೀರಗಾಸೆ, ಚೆಂಡೆ, ನಾಸಿಕ್ ಬ್ಯಾಂಡ್ ಗಳು ಮೆರವಣಿಗೆಗೆ ಮೆರುಗು ಹೆಚ್ಚಿಸಿದವು. ಕೇಸರಿ ಬಾವುಟಗಳನ್ನು ಬೀಸಿ ಯುವಕರು ಹೆಜ್ಜೆ ಹಾಕಿದರು. ಭಗತ್ ಸಿಂಗ್, ಬಾಲಗಂಗಾಂಧರನಾಥ ತಿಲಕ್, ಶಿವಾಜಿ, ಬುದ್ದ, ಬಸವಣ್ಣ, ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರ ರಾರಾಜಿಸಿದವು.ಗಣೇಶನಿಗೆ ಜೈಕಾರ ಹಾಕುತ್ತಾ ಯುವಕರು, ಯುವತಿಯರು ಹೆಜ್ಜೆ ಹಾಕಿದರು. ರಸ್ತೆ ಬದಿಯಲ್ಲಿ ನಿಂತ ಸಾರ್ವಜನಿಕರು ಮೆರವಣಿಗೆ ಕಣ್ತುಂಬಿಕೊಂಡರು.
ವೀರನಗೆರೆಯಿಂದ ಆರಂಭವಾದ ಮೆರವಣಿಗೆಯು ಫಿಲೋಮಿನಾ ಚರ್ಚ್, ಅಶೋಕ ರಸ್ತೆ, ದೊಡ್ಡಗಡಿಯಾರ ವೃತ್ತ, ದೇವರಾಜು ಅರಸು ರಸ್ತೆ, ಜೆಎಲ್ ಬಿ ರಸ್ತೆಯಲ್ಲಿ ಮೆರವಣಿಗೆ ಕೊನೆಗೊಂಡಿತು. ನಂತರ, ಶ್ರೀರಂಗಪಟ್ಟಣದ ಸಾಯಿಬಾಬಾ ದೇವಸ್ಥಾನದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜಿಸಲಾಯಿತು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್. ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ಧನಂಜಯ್, ಮಾಜಿ ಮೇಯರ್ ಶಿವಕುಮಾರ್, ಸಮಿತಿಯ ಶ್ರೀನಿವಾಸ್, ಸು. ಮುರಳಿ, ಸಂಪತ್ ಮೊದಲಾದವರು ಇದ್ದರು.
ಪೊಲೀಸರಿಂದ ಬಿಗಿ ಭದ್ರತೆ:ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಿನ್ನೆಲೆಯಲ್ಲಿ ನಗರ ಪೊಲೀಸರು ಮೆರವಣಿಗೆ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಿ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗದಲ್ಲಿ ಸಾಗುವಂತೆ ಸೂಚಿಸಿದರು. ಮೊಬೈಲ್ ಕಮಾಂಡರ್ ವಾಹನ, ಚಾಮುಂಡಿ ಪಡೆ, ಸಿಎಆರ್ ಸೇರಿದಂತೆ ನಗರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.ಹಿಂದೂಗಳು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ
ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿಯು ವೀರನಗೆರೆ ವಿದ್ಯಾಗಣಪತಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಧನಂಜಯ್ ಮಾತನಾಡಿ, ಹಿಂದೂಗಳು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿ, ಪಕ್ಷ, ಪಂಥಗಳನ್ನು ದೂರ ಮಾಡಿ ಹಿಂದೂಗಳು ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ ಎಂದರು.ಪ್ರಪಂಚದಲ್ಲಿ ಧರ್ಮ ಎನ್ನುವುದಿದ್ದರೆ ಅದು ಹಿಂದೂ ಧರ್ಮ ಮಾತ್ರ. ಉಳಿದೆಲ್ಲ ವ್ಯಕ್ತಿ ಆರಾಧನೆ ನಡೆಸುವ ಮತಗಳು. ಹೀಗಾಗಿ, ನಾವು ಜಾಗೃತವಾಗಿ ಧಾರ್ಮಿಕ ಕೇಂದ್ರ, ಶ್ರದ್ಧಾ ಕೇಂದ್ರ ಉಳಿಸಿಕೊಳ್ಳಬೇಕು. ಧರ್ಮಕ್ಕೆ ಅಡ್ಡಿ ಬಂದವರ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.