ಹೂವಿನಹಡಗಲಿ: ಮಠ ಮಾನ್ಯ ಮತ್ತು ದೇವಸ್ಥಾನಗಳ ಜಾತ್ರೆಯಲ್ಲಿ ಆಯೋಜಿಸುವ ಉಚಿತ ಸಾಮೂಹಿಕ ವಿವಾಹಗಳು, ಬಡವರ ಆರ್ಥಿಕ ಹೊರೆಯನ್ನು ತಗ್ಗಿಸುತ್ತವೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ರಾಮಸ್ವಾಮಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಉಚಿತ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಸ್ಥಾನಗಳಲ್ಲಿ ಜರುಗುವ ಸಾಮೂಹಿಕ ವಿವಾಹಗಳಲ್ಲಿ ಎಲ್ಲ ಜಾತಿ, ಧರ್ಮದವರು ಭಾಗವಹಿಸುತ್ತಾರೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತವೆ ಎಂದರು.
ಆಧುನಿಕ ಬದುಕಿನಲ್ಲಿ ಮನುಷ್ಯ ಸಾಮರಸ್ಯದ ಬದುಕನ್ನು ಮರೆಯುತ್ತಿದ್ದಾನೆ. ವರದಕ್ಷಿಣೆ ಎಂಬ ಪಿಡುಗು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ವರದಕ್ಷಿಣೆಯೂ ಹೆಚ್ಚಾಗುತ್ತಿದೆ. ವರದಕ್ಷಿಣೆ ಕಿರುಕುಳ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ತೀರಾ ಕಳವಳಕಾರಿ ಆತಂಕ ಸೃಷ್ಟಿಸುತ್ತದೆ ಎಂದರು.ಸಾಮೂಹಿಕ ವಿವಾಹಗಳ ನೆಪದಲ್ಲಿ ವರದಕ್ಷಿಣೆ ವ್ಯವಹಾರ ಸಮಾಜದಲ್ಲಿ ಕಡಿಮೆಯಾಗುತ್ತಿದೆ. ಇದು ಉತ್ತಮ ಬೆಳವಣಿಗೆ, ಬಡವರಿಗೆ ಆರ್ಥಿಕ ಹೊರೆ ಕಡಿಮೆಯಾಗಿ ಕುಟುಂಬಗಳು ಸಾಲದ ಸೂಳಿಯಿಂದ ತಪ್ಪಿಸಿಕೊಳ್ಳಲು ಸಹಕರಿಯಾಗಿದೆ. ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವ ಅನೇಕ ಪಾಲಕರು ಬುದ್ಧಿ ಕಲಿಯಬೇಕಿದೆ. ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸಿ ಅಭ್ಯಾಸ ಮಾಡಲು ಪ್ರೋತ್ಸಹಿಸಿದರೆ ಆ ಹೆಣ್ಣು ಮಗಳು ಉನ್ನತ ಹುದ್ದೆ ಪಡೆಯುತ್ತಾಳೆ. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಾಜ ಸಹಕರಿಸಬೇಕು ಎಂದರು.
ಶಾಖಾ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ನೂತನ ಜೀವನ ಆರಂಭಿಸುತ್ತಿರುವ ದಂಪತಿಗಳು ಗುರು ಹಿರಿಯರನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಮಾದರಿ ಜೀವನ ನಡೆಸಬೇಕು ಎಂದರು.7 ಜೋಡಿ ನವ ವಧು-ವರರು ಹೊಸ ಜೀವನಕ್ಕೆ ಕಾಲಿಟ್ಟರು. ಕೊಂಬಳಿ ಚೌಕಿಮಠದ ಗಾಡಿತಾತ, ಶ್ರೀರಾಮ ದೇವಸ್ಥಾನದ ಧರ್ಮಕರ್ತ ಡಾ.ರಾಕೇಶಯ್ಯ ರಾಮಸ್ವಾಮಿ, ಹಾಲಸ್ವಾಮಿಮಠದ ಹಾಲಸ್ವಾಮೀಜಿ, ಪ್ರಮುಖರಾದಕೋಡಿಹಳ್ಳಿ ಮುದುಕಪ್ಪ, ಸಂತೋಷ್ ಜೈನ್, ಪುನೀತ್ ಇತರರಿದ್ದರು.