ಶೃಂಗೇರಿಯಲ್ಲಿ ಸಾಮೂಹಿಕ ವಿವಾಹ । ದಾಂಪತ್ಯ ಜೀವನಕ್ಕೆ ಕಾಲಿಟ್ಟ 12 ಜೋಡಿಗಳು.
ಕನ್ನಡಪ್ರಭ ವಾರ್ತೆ, ಶೃಂಗೇರಿಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ. ಸಮಾಜಕ್ಕೆ ಮಾದರಿಯಾಗಿದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಶ್ರೀ ಮಠದ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಖರ್ಚುವೆಚ್ಚ ಆಡಂಬರವಿಲ್ಲದೇ ಸರಳವಾಗಿ ನಡೆಯುವಂತಹ ಇಂತಹ ಕಾರ್ಯಕ್ರಮ ದುಂದು ವೆಚ್ಚಗಳನ್ನು ತಡೆಯುವುದಲ್ಲದೇ, ಆರ್ಥಿಕ ಸಬಲೀಕರಣಕ್ಕೆ ಪೂರಕ. ಕುಟುಂಬದ ಜೊತೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಿದೆ.ಶೃಂಗೇರಿಯಲ್ಲಿ 2002 ರಿಂದ ಸಾಮೂಹಿಕ ವಿವಾಹ ಆರಂಭಗೊಂಡಿದ್ದು ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಕೋವಿಡ್ ಸಂದರ್ಭಗಳಲ್ಲಿ ನಿಂತುಹೋಗಿ ಮತ್ತೆ ಆರಂಭವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಶಾರದೆ ಆಶೀರ್ವಾದ ಸಿಗುತ್ತದೆ ಎಂಬ ಕಾರಣದಿಂದ ವಿವಿಧೆಡೆಗಳಿಂದ ಬಂದು ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ವರರು ಪರಸ್ಪರ ಒಬ್ಬರನೊಬ್ಬರು ಅರಿತು ಸಹಬಾಳ್ವೆ ನಡೆಸಿದಾಗಲೇ ಜೀವನಕ್ಕೆ ಅರ್ಥ ಸಿಗುತ್ತದೆ ಎಂದು ಶುಭ ಹಾರೈಸಿದರು.
ಮಂಗಲಸೂತ್ರ ವಿತರಿಸಿ ಮಾತನಾಡಿ ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರುಳಿ ಸಾಮೂಹಿಕ ವಿವಾಹ ಒಳ್ಳೆಯ ಕಾರ್ಯಕ್ರಮ ಇದು ಆರ್ಥಿಕ ಹೊರೆ ತಗ್ಗಿಸಿ, ಬಡಕುಟುಂಬಗಳಿಗೆ ಆಧಾರವಾಗಿದೆ. ನವದಂಪತಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಉತ್ತಮ ವೇದಿಕೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗರೀಕ ಹಿತರಕ್ಷಣಾ ಸಮೀತಿ ಅಧ್ಯಕ್ಷ ಎ.ಎಸ್.ನಯನ ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರ ಘಟ್ಟ. ಇದರಲ್ಲಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರ್ಪಣೆ ಆದರ್ಶ. ಶೃಂಗೇರಿಯಲ್ಲಿ ನಡೆದ ಸಾಮೂಹಿಕ ವಿವಾಹಗಳಲ್ಲಿ ಸುಮಾರು 350 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. ಇಂದಿನ ಕಾರ್ಯಕ್ರಮದಲ್ಲಿ ವಿವಿಧೆಡೆಗಳಿಂದ ಬಂದ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಮಾಜದಲ್ಲಿ ಉತ್ತಮ ಮಾನವೀಯ, ನೈತಿಕ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶ್ರೀಮಠದ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಶ್ರೀಮಠದಿಂದ ವಧು ವರರಿಗೆ ವಸ್ತ್ರ, ಮಂಗಲ ಸೂತ್ರ ಸೇರಿದಂತೆ ಎಲ್ಲಾ ವಸ್ತುಗಳನ್ನು ನೀಡಲಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಅನೂಪ್ ಸಂಜೋಬ್, ಪುಷ್ಪರಾಜೇಗೌಡ, ಶ್ರೀಮಠದ ಮ್ಯಾನೇಜರ್ ಸತೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಪುಷ್ಪ ಲಕ್ಷ್ಮಿನಾರಾಯಣ್ ಸ್ವಾಗತಿಸಿದರು.
17 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಹದಲ್ಲಿ ಶ್ರೀಮಠದ ಜಗದ್ಗುರುಗಳ ಆಪ್ತಸಹಾಯಕ ಶಂ.ನ.ಕೃಷ್ಣಮೂರ್ತಿ ಭಟ್ ಮಾತನಾಡಿದರು.
17 ಶ್ರೀ ಚಿತ್ರ 2-ಶೃಂಗೇರಿ ಗೌರಿಶಂಕರ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ವರರು.