ಸಾಮೂಹಿಕ ವಿವಾಹ ಕಾರ್ಯ ಶ್ಲಾಘನೀಯ: ಸಚಿವ

| Published : Sep 17 2024, 12:48 AM IST

ಸಾರಾಂಶ

ಈದ್ಗಾ ಕಮೀಟಿಯ ಸಾಮಾಜಿಕ ಸೇವೆಗಾಗಿ ರಾಜ್ಯ ಸರ್ಕಾರದಿಂದ ಆ್ಯಂಬುಲೆನ್ಸ್‌ ನೀಡುವ ಭರವಸೆ ನೀಡುವುದಾಗಿ ಘೋಷಿಸಿದರು.

ಗದಗ: ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಬದಲಾವಣೆಯ ಮೇಲೆ ಪ್ರಮುಖ ಪಾತ್ರ ಬೀರಿರುವ ಪ್ರವಾದಿ ಮಹಮ್ಮದ ಪೈಗಂಬರ ಜಯಂತಿಯಂದು ಬೆಟಗೇರಿ ಈದ್ಗಾ ಕಮೀಟಿಯ ಮುಸ್ಲಿಂ ಧರ್ಮೀಯರ ಉಚಿತ ಸಾಮೂಹಿಕ ವಿವಾಹ ಕಾರ್ಯ ನಡೆಸಿರುವುದು ಶ್ಲಾಘನೀಯ, ಇಂತಹ ಸಮಾಜಮುಖಿ ಕಾರ್ಯಗಳು ಹೆಚ್ಚೆಚ್ಚು ನಡೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಸೋಮವಾರ ಬೆಟಗೇರಿ ಈದ್ಗಾ ಕಮೀಟಿ ಸೋಮವಾರ ಪ್ರವಾದಿ ಮಹಮ್ಮದ ಪೈಗಂಬರ್ ಜಯಂತಿಯಂದು ಸಂಘಟಿಸಿರುವ ಮುಸ್ಲಿಂ ಧರ್ಮಿಯರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಮ್ಮದ ಪೈಗಂಬರ್ ಜಯಂತಿಯಂದು ಸಾಮೂಹಿಕ ವಿವಾಹ ಕಾರ್ಯದ ಮೂಲಕ ಬಡವ, ದುರ್ಬಲರ ಕಣ್ಣೀರು ಒರೆಸುವ ಸಾಮಾಜಿಕ ಕಾರ್ಯ ಶ್ಲಾಘನೀಯವಾಗಿದೆ. ಯುವ ಪೀಳಿಗೆ ಪೈಗಂಬರ್ ತತ್ವಾದರ್ಶ ಮೈಗೂಡಿಸಿಕೊಂಡು ಸಮಾಜ ಸೇವೆಗೆ ಮುಂದಾಗಬೇಕಿದೆ. ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷ ಪೀರಸಾಬ್‌ ಕೌತಾಳ ಅವರಿಗೆ ಕೆ.ಎಸ್.ಆರ್.ಟಿ.ಸಿ ನಿಗಮದ ಉಪಾಧ್ಯಕ್ಷರಾಗಿ ಜವಾಬ್ದಾರಿ ನೀಡಲಾಗಿದೆ. ಅದರ ಜತೆಗೆ ಬೆಟಗೇರಿ ಈದ್ಗಾ ಕಮೀಟಿಯ ಅಧ್ಯಕ್ಷರಾಗಿ ಉತ್ತಮವಾಗಿ ಜನಸೇವೆಯಲ್ಲಿದ್ದಾರೆ, ಈದ್ಗಾ ಕಮೀಟಿಯ ಸಾಮಾಜಿಕ ಸೇವೆಗಾಗಿ ರಾಜ್ಯ ಸರ್ಕಾರದಿಂದ ಆ್ಯಂಬುಲೆನ್ಸ್‌ ನೀಡುವ ಭರವಸೆ ನೀಡುವುದಾಗಿ ಘೋಷಿಸಿದರು.

ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಸಾಮೂಹಿಕ ವಿವಾಹ ಕಲ್ಪನೆ 12ನೇ ಶತಮಾನದಲ್ಲೇ ಜಾರಿಯಲ್ಲಿತ್ತು, ಅಂದು ಗುಡ್ಡಾಪೂರ ದಾನಮ್ಮ ತಮ್ಮ ಮನೆಯಲ್ಲಿ 500 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯ ಮಾಡುವ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮದ ಮುನ್ನುಡಿ ಬರೆದಿದ್ದರು.

ಸಾಮಾಜಿಕ ಕಳಕಳಿಯ ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷ,ಬೆಟಗೇರಿ ಈದ್ಗಾ ಕಮೀಟಿಯ ಅಧ್ಯಕ್ಷ ಹಾಗೂ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರಾಗಿರುವ ಪೀರಸಾಬ್‌ ಕೌತಾಳ ಅವರ ಸಾಮಾಜಿಕ ಸೇವೆ ಇಂದಿನ ಸಮುದಾಯಕ್ಕೆ ಮಾದರಿಯಾಗಿದೆ, ಭೂಲೋಕದ ಭಗವಂತ, ನಡೆದಾಡುವ ದೇವರು ಖ್ಯಾತಿಯ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜನ್ಮ ದಿನಾಚರಣೆಯಂದು ಹಿಂದೂ ಧರ್ಮಿಯರ ಉಚಿತ ಸಾಮೂಹಿಕ ವಿವಾಹ ಹಾಗೂ ಪ್ರವಾದಿ ಮಹಮ್ಮದ ಪೈಗಂಬರ್ ಜಯಂತಿಯಂದು ಮುಸ್ಲಿಂ ಧರ್ಮಿಯರ ಉಚಿತ ಸಾಮೂಹಿಕ ವಿವಾಹ ಕಾರ್ಯಗಳ ಮೂಲಕ ಜನಸೇವೆಯಲ್ಲಿದ್ದಾರೆ. ಇಂದಿನ ದಿನಮಾನದಲ್ಲಿ ಲಕ್ಷ ಲಕ್ಷ ವೆಚ್ಚ ಮಾಡಿ ಮದುವೆ ಮಾಡಬಹುದು, ಆದರೆ ಅಸಂಖ್ಯಾತ ಧರ್ಮ ಗುರುಗಳ ಹಾಗೂ ಗಣ್ಯರ ಆಶಿರ್ವಾದ ಕೊಡಿಸಲು ಸಾದ್ಯವಿಲ್ಲ ಆ ಕೆಲಸ ಪೀರಸಾಬ್‌ ಮಾಡುತ್ತಿದ್ದಾರೆ ಎಂದರು.

ಬೆಂಗಳೂರಿನ ಮೌಲಾನಾ ನಿಜಾಮುದ್ದೀನ್ ಕಾಸ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಆರ್. ಅಣ್ಣಿಗೇರಿ, ಇನಾಯತುಲ್ಲಾ ಪೀರಜಾದೆ, ಮಹಮ್ಮದ ಜಕರೀಯಾ ರಶಾಧಿ, ಅಬ್ದುಲ್ ಗಪುರಸಾಬ್‌, ಅರೀಫಸಾಬ್‌ ಖಾಶ್ಮಿ, ಸರ್ಪರಾಜ ಖಾಸ್ಮಿ,ಅಬ್ದುಲ್ ಸಮದ್ ಜಕಾತಿ, ಶಬ್ಬಿಋ ಕಲ್ಮನಿ, ಅಬ್ದುಲ್ ರಹೀಮಸಾಬ ಇನಾಮಿ, ಶಬ್ಬೀರ ಅಹಮ್ಮದ ಇನಾಮಿ, ಮಹಮ್ಮದ ತೌಫಿಕ ತಹಸೀಲ್ದಾರ್‌, ಅನ್ವರಸಾಬ್‌ ಈಟಿ, ಡಾ, ಎಂ.ಆರ್. ಢಾಲಾಯತ, ಉಪಾಧ್ಯಕ್ಷ ಅನ್ವರ ಈಟಿ, ಎಂ.ಆರ್. ಢಲಾಯತ ಸೇರಿದಂತೆ ಪದಾಧಿಕಾರಿಗಳಿದ್ದರು.