ಸಾಮೂಹಿಕ ವಿವಾಹಗಳು ಬಡವರಿಗೆ ಆಶಾದೀಪ: ಮಾದಾರ ಚನ್ನಯ್ಯ ಸ್ವಾಮೀಜಿ

| Published : Jun 12 2024, 12:40 AM IST

ಸಾಮೂಹಿಕ ವಿವಾಹಗಳು ಬಡವರಿಗೆ ಆಶಾದೀಪ: ಮಾದಾರ ಚನ್ನಯ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ರೋಣ ತಾಲೂಕಿನ ಸವಡಿ ಗ್ರಾಮದ ಶ್ರೀ ಮರುಳ‌ ಸಿದ್ದೇಶ್ವರ ಮಠ ಆವರಣದಲ್ಲಿ ಸೋಮಯ್ಯ ಸ್ವಾಮಿಗಳ 27ನೇ ಪುಣ್ಯಾರಾಧನೆ ಹಾಗೂ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ರೋಣ

ಸಾಮೂಹಿಕ ವಿವಾಹಗಳು ಬಡವರ ಆರ್ಥಿಕ ಹೊರೆ ನೀಗಿಸುವ ಆಶಾದೀಪವಾಗಿದ್ದು, ಆದ್ದರಿಂದ ಮಠ ಮಾನ್ಯಗಳು, ಸಂಘ-ಸಂಸ್ಥೆಗಳು ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ಸಮಾಜದಲ್ಲಿ ಭಾವೈಕ್ಯತೆ, ಸಾಮರಸ್ಯತೆ ಮೂಡಿಸಬೇಕಿದೆ ಎಂದು ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸವಡಿ ಗ್ರಾಮದ ಶ್ರೀ ಮರುಳ‌ ಸಿದ್ದೇಶ್ವರ ಮಠ ಆವರಣದಲ್ಲಿ ಸೋಮಯ್ಯ ಸ್ವಾಮಿಗಳ 27ನೇ ಪುಣ್ಯಾರಾಧನೆ ಹಾಗೂ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಉದ್ಘಾಟಿಸಿ ಮಾತನಾಡಿದರು.

ದುಂದು ವೆಚ್ಚದ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕುವ ಮೂಲಕ ಸರಳ ಮತ್ತು ಸಾಂಪ್ರದಾಯಿಕ ವಿವಾಹಗಳನ್ನು ಜನತೆ ಪ್ರೋತ್ಸಾಹಿಸಬೇಕು. ಈ ದಿಶೆಯಲ್ಲಿ ಜನತೆಯ ಮನ ಪರಿವರ್ತನೆಗೊಳ್ಳಬೇಕು. ಸಾವಿರಾರು ಜನರ ಆಶೀರ್ವಾದ ಮಧ್ಯೆ ಜರುಗುವ ಇಂತಹ ಮದುವೆಗಳು ಭಾವೈಕ್ಯತೆ ಮತ್ತು ಸಾಮರಸ್ಯ ಪ್ರತಿಬಿಂಬಿಸುತ್ತವೆ. ಸಾಮೂಹಿಕ ವಿವಾಹಗಳಿಗೆ ಬೇಕಾದ ಸಹಾಯ ಸಹಕಾರವನ್ನು ಉಳ್ಳವರು ಮಾಡುವಲ್ಲಿ ಮುಂದಾಗಬೇಕು. ಬಡವರ ಕಲ್ಯಾಣ ಕಾರ್ಯದಲ್ಲಿ ವ್ಯಕ್ತಿ ಸದಾ ಭಾಗಿಯಾಗಿರಬೇಕು. ಅಂದಾಗ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ವರ್ಷ ಸವಡಿ‌ ಗ್ರಾಮದಲ್ಲಿ ಮರುಳ ಸಿದ್ದೇಶ್ವರ ಮಠದ ವತಿಯಿಂದ ಜರುಗುವ ಸಾಮೂಹಿಕ ವಿವಾಹಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಮರುಳ ಸಿದ್ದೇಶ್ವರ ಮಠದ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಜಿ ಮಾತನಾಡಿ, ಸರಳ ಮತ್ತು ಸಾಂಪ್ರದಾಯಿಕತೆಯಿಂದ ಕೂಡಿದ ಸಾಮೂಹಿಕ ವಿವಾಹಗಳು ಏರ್ಪಡಿಸುವಲ್ಲಿ ಪ್ರಗತಿಪರರು, ಬುದ್ಧಿಜೀವಿಗಳು, ಚಿಂತನಾಶೀಲರು ಮುಂದಾಗಬೇಕು. ಬಡವರ ಏಳ್ಗೆಯನ್ನು ಬಯಸುವ ಸಾಮೂಹಿಕ ವಿವಾಹಗಳು ಸಾಮಾಜಿಕ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತವೆ. ಸಾಮೂಹಿಕ ವಿವಾಹ ವೇದಿಕೆ ಮೂಲಕ ನವ ದಾಂಪತ್ಯಕ್ಕೆ ಕಾಲಿಡುವ ಜೋಡಿಗಳು ಅತ್ಯಂತ ಅದೃಷ್ಟಶಾಲಿಗಳಾಗಿರುತ್ತಾರೆ. ಪೈಪೋಟಿಗೆ ಬಿದ್ದಂತೆ ದುಂದು ವೆಚ್ಚಖರ್ಚು ಮಾಡಿ ಆಡಂಭರದ ಮದುವೆಗಳನ್ನು ಮಾಡಲಾಗುತ್ತದೆ. ಇದರಿಂದ ಸಾಲದ ಹೊರೆ ಹೆಚ್ಚಾಗಿ ಸಂಕಷ್ಟದ ಪರಿಸ್ಥಿತಿಯನ್ನು ಇಂದು ಅದೆಷ್ಟೋ ಕುಟುಂಬಗಳು ಎದುರಿಸುತ್ತಿವುದನ್ನು ನಾವಿಂದು ಕಾಣುತ್ತಿದೆ. ಆದ್ದರಿಂದ ಜನತೆಯ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸಿ, ಬಡವರಿಗೆ ಸಹಾಯವಾಗುವ ಸರಳ ಸಾಮೂಹಿಕ ವಿವಾಹಗಳ ಹೆಚ್ಚು ಹೆಚ್ಚು ನಡೆಯಬೇಕು ಎಂದರು.ಸಾಮೂಹಿಕ ವಿವಾಹಗಳು ವೇದಿಕೆ ಮೂಲಕ ಒಟ್ಟು 4 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪನೆ ಮಾಡಿದರು. ಈ ವೇಳೆ ಅನೇಕ ಗಣ್ಯರನ್ನು, ಸಾಧಕರನ್ನು, ಯುವಕ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಸಾನಿಧ್ಯವನ್ನು ಕಾಕನೂರ ಇಟಗಿ ಮಠದ ಗದಿಗೆಪ್ಪಜ್ಜನವರು, ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ, ಗುಲಗಂಜಿ ಮಠದ ಗುರುಪಾದ ದೇವರು, ಸದಾಶಿವ ಶಿವಾಚಾರ್ಯರು, ಬ್ರಹ್ಮನಿಷ್ಠ ಷಡಕ್ಷರ ದೇವರು, ಉಚ್ಚಯ್ಯ ಸ್ವಾಮೀಜಿ, ಮಲ್ಲಯ್ಯನವರು, ಸಂಗನಬಸಯ್ಯ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ, ಡಿ.ಎಸ್.ಎಸ್. ಇಲಕಲ್ಲ ಭರಮರಡ್ಡಿ ಚಿಂತಕಕಮಲದಿನ್ನಿ, ಜೈಭೀಮ ಸಂಘಟನೆ ರಾಜ್ಯ ಉಪಾಧ್ಯಕ್ಷರು ಮೈಲಾರಪ್ಪ ಚಳ್ಳಮರದ, ಸಂಗಪ್ಪ ಹೊಸಮನಿ, ಎಸ್.ಕೆ. ನಡುವಿನಮನಿ, ಎಸ್.ಎಸ್. ಹಲಗಿ, ಸಂಗಪ್ಪ ಹುಣಸಿಮರದ, ಶಿವಪ್ಪ ಮದಾರಿ, ಸುರೇಶ ಹಲಗಿ, ಮಳೆಸಿದ್ದಪ್ಪ ಹುಣಸಿಮರದ, ಶರಣಪ್ಪ ಮಲ್ಲಾಪೂರ, ದುರ್ಗಪ್ಪ‌ ಮಲ್ಲಾಪೂರ, ಕನಕಪ್ಪ‌ ಮಲ್ಲಾಪೂರ, ಬಾಳಪ್ಪ ಬುರಡಿ, ಸೇರಿದಂತೆ ಸವಡಿ, ಮಲ್ಲಾಪೂರ,ಚಿಕ್ಕಮಣ್ಣೂರ ,ರೋಣ, ಅರಹುಣಸಿ ವಿವಿದ ಗ್ರಾಮಸ್ಥರು ಉಪಸ್ಥಿತರಿದ್ದರು. ಸಿದ್ದು ಹಲಗಿ ನಿರೂಪಿಸಿದರು.