ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ವರದಾನ: ವಾಗೀಶ್

| Published : Feb 26 2025, 01:01 AM IST

ಸಾರಾಂಶ

ಅದ್ಧೂರಿ, ಆಡಂಬರದ ವಿವಾಹಗಳಲ್ಲಿ ದುಪ್ಪಟ್ಟು ಹಣ ಖರ್ಚಾಗಲಿದ್ದು, ಪೋಷಕರು ಸಾಲದ ಕೂಪಕ್ಕೆ ಸಿಲುಕುತ್ತಾರೆ. ಸರಳ ಸಾಮೂಹಿಕ ವಿವಾಹದಿಂದ ವಧು-ವರ ಇಬ್ಬರ ಕುಟುಂಬಗಳಿಗೂ ಹಣ ಉಳಿತಾಯ ಆಗುತ್ತದೆ. ಬಡ ಕುಟುಂಬಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ವರದಾನವಾಗಿವೆ ಎಂದು ಗ್ರಾಮ ಮುಖಂಡ ಬಿ.ಎಚ್. ವಾಗೀಶ್ ಹೇಳಿದ್ದಾರೆ.

- ಮಲೇಕುಂಬಳೂರಲ್ಲಿ ಶ್ರೀ ಆಂಜನೇಯ ರಥೋತ್ಸವ, ಸಾಮುಹಿಕ ವಿವಾಹ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಅದ್ಧೂರಿ, ಆಡಂಬರದ ವಿವಾಹಗಳಲ್ಲಿ ದುಪ್ಪಟ್ಟು ಹಣ ಖರ್ಚಾಗಲಿದ್ದು, ಪೋಷಕರು ಸಾಲದ ಕೂಪಕ್ಕೆ ಸಿಲುಕುತ್ತಾರೆ. ಸರಳ ಸಾಮೂಹಿಕ ವಿವಾಹದಿಂದ ವಧು-ವರ ಇಬ್ಬರ ಕುಟುಂಬಗಳಿಗೂ ಹಣ ಉಳಿತಾಯ ಆಗುತ್ತದೆ. ಬಡ ಕುಟುಂಬಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ವರದಾನವಾಗಿವೆ ಎಂದು ಗ್ರಾಮ ಮುಖಂಡ ಬಿ.ಎಚ್. ವಾಗೀಶ್ ಹೇಳಿದರು.

ತಾಲೂಕಿನ ಮಲೇಕುಂಬಳೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅಂಗವಾಗಿ ದೇವಸ್ಥಾನ ಅವರಣದಲ್ಲಿ ನಡೆದ ಸರಳ ಸಾಮುಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು-ವರರಿಗೆ ಶುಭ ಹಾರೈಸಿ ಅವರು ಮಾತನಾಡಿದರು.

ಪ್ರತಿ ವರ್ಷ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ನಡೆಯುತ್ತದೆ. ಗ್ರಾಮದ ಹಿರಿಯರೆಲ್ಲ ಸೇರಿ ಗ್ರಾಮದ ಬಡಜನರಿಗೆ ಅನುಕುಲವಾಗಲೆಂದು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ತಿರ್ಮಾನಿಸಿದ್ದೇವೆ. ಅದರಂತೆ ಪ್ರತಿವರ್ಷ ವಿವಾಹ ಕಾರ್ಯಕ್ರಮ ನಡೆಯುತ್ತದೆ. ಇದರಲ್ಲಿ ಗ್ರಾಮದವರು ನೂತನ ವಧು-ವರರಿಗೆ ತಾಳಿ ಬಟ್ಟೆಯನ್ನು ದೇಣಿಗೆ ರೂಪದಲ್ಲಿ ನೀಡುತ್ತಾರೆ. ಭಕ್ತರ ಸಹಕಾರದಿಂದ ಬಡವರ ಮದುವೆಗಳು ಶ್ರೀ ಆಂಜನೇಯ ಸ್ವಾಮಿ ಸನ್ನಿಧಾನದಲ್ಲಿ ನಡೆಯುವುದು ಶ್ರೇಯಸ್ಸು ತಂದುಕೊಡಲಿದೆ ಎಂದರು.

ಮುಖಂಡ ಕೆ.ಬಿ.ರಾಜಶೇಖರ್ ಮಾತನಾಡಿ, ನೂತನ ದಂಪತಿಗಳು ಸಾಮರಸ್ಯದಿಂದ ಜೀವನ ಸಾಗಿಸಬೇಕು. ಇಬ್ಬರು ಸಮಾನವಾಗಿ ಚಿಂತನೆ ನಡೆಸಿ, ಜೀವನದಲ್ಲಿ ಮುನ್ನಡೆಯಬೇಕು. ಸಣ್ಣಪುಟ್ಟ ವಿಷಯಗಳಿಗೆ ವೈಮನಸ್ಸು ತಂದುಕೂಳ್ಳಬಾರದು. ನಿಮ್ಮನ್ನು ಸಾಕಿ ಸಲುಹಿದ ತಂದೆ- ತಾಯಿಗೆ ಪ್ರೀತಿ-ವಿಶ್ವಾಸದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ಶ್ರೀ ಮಾರುತಿ ಯುವಕರ ಅನ್ನ ದಾಸೋಹ ಟ್ರಸ್ಟ್ ಕಮಿಟಿಯಿಂದ ಬಂದ ಭಕ್ತರಿಗೆ ಉಚಿತ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಸರಳ ಸಾಮುಹಿಕ ವಿವಾಹ ಕಾರ್ಯಕ್ರಮದ ಸಂದರ್ಭ ಗ್ರಾಮದ ಹಿರಿಯ ಮುಖಂಡರಾದ ಕೆ.ಆರ್. ವರದರಾಜ್, ಎನ್.ಎಚ್. ಕೃಷ್ಣಪ್ಪ, ಬಿ.ಎಚ್. ವಾಗೀಶ್, ಜಿ.ಆರ್.ಪ್ರಕಾಶ್.ಎನ್.ಎಚ್. ಕೃಷ್ಣಪ್ಪ, ಎಚ್.ಬಿ. ಸೋಮಶೇಖರ್, ಸುಧಾಕರ್, ಅಣ್ಣಪ್ಪ, ಟಿ.ಎಸ್.ಕೃಷ್ಣಪ್ಪ, ಟಿ.ಲಕ್ಷ್ಮೀಪತಿ, ಗೋವಿಂದರಾಜು, ಕೆ.ಎಸ್. ರಂಗನಾಥ ಸ್ವಾಮಿ, ಜಿ.ಶ್ರೀನಿವಾಸ್, ತಿಪ್ಪೇಸ್ವಾಮಿ, ಷಣ್ಮುಖಪ್ಪ, ಹನುಮಂತಪ್ಪ ಸೇರಿದಂತೆ ಹಲವರು ಹಾಜರಿದ್ದರು.

- - -

ಬಾಕ್ಸ್‌ * ಜೈ ಆಂಜನೇಯ... ಜೈ ಶ್ರೀರಾಮ್‌...ಸೋಮವಾರ ಬೆಳಗಿನ ಜಾವ ಭವ್ಯವಾಗಿ ಅಲಂಕರಗೊಂಡಿದ್ದ ರಥಕ್ಕೆ ಅರ್ಚಕರಿಂದ ಪೂಜೆ ನೆರವೇರಿತು. ಅನಂತರ ನೂರಾರು ಭಕ್ತರು ರಥವನ್ನು ಜೈ ಆಂಜನೇಯ ಸ್ವಾಮಿ, ಜೈ ಶ್ರೀರಾಮ್ ಎಂದು ಘೊಷಣೆ ಮೊಳಗಿಸುತ್ತ ರಥವನ್ನು ದೇವಸ್ಥಾನ ಆವರಣದವರೆಗೆ ಎಳೆದರು. ಭಕ್ತರು ಮಂಡಕ್ಕಿ, ಮೆಣಸಿನಕಾಳು, ಉತ್ತುತ್ತಿ ಹಾಗೂ ಬಾಳೆಹಣ್ಣುಗಳನ್ನು ರಥಕ್ಕೆ ಎರಚಿ, ಭಕ್ತಿ ಸಮರ್ಪಿಸಿದರು. ಕೆಲವರು ರಥದ ಗಾಲಿಗೆ ಹಣ್ಣುಕಾಯಿ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು.

- - -

-24ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿ ತಾಲೂಕಿನ ಮಲೇಕುಂಬಳೂರು ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅಂಗವಾಗಿ ಸಾಮುಹಿಕ ವಿವಾಹ ಕಾರ್ಯಕ್ರಮ ನಡೆಯಿತು.