ಸಾರಾಂಶ
ಇಂದಿನ ದಿನಮಾನಗಳಲ್ಲಿ ಲಕ್ಷಾಂತರ ವೆಚ್ಚ ಮಾಡಿ ಬಡವರಿಗೆ ಮದುವೆ ಮಾಡುವುದು ಸುಲಭದ ಮಾತಲ್ಲ. ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಮಾಡುವುದು ಉತ್ತಮ. ಇಲ್ಲಿ ಉಳಿತಾಯವಾಗುವ ಹಣವನ್ನು ಸಂಸಾರ ಸಾಗಿಸಲು, ಮುಂದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬಳಸಬಹುದು
ಹುಬ್ಬಳ್ಳಿ: ದುಂದುವೆಚ್ಚಕ್ಕೆ ಕಡಿವಾಣ ಹಾಕುವಲ್ಲಿ ಸಾಮೂಹಿಕ ವಿವಾಹಗಳ ಪಾತ್ರ ಮಹತ್ವದ್ದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಅಕ್ಷಯಪಾರ್ಕ್ ಸಂತೆ ಮೈದಾನದಲ್ಲಿ ಭಾನುವಾರ ಕ್ಷಮತಾ ಸೇವಾ ಸಂಘ ಹಾಗೂ ನವಯುಗ ಸಂಘಟನೆ ವತಿಯಿಂದ ಆಯೋಜಿಸಿದ್ದ 22ನೇ ವರ್ಷದ, 22 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ದಿನಮಾನಗಳಲ್ಲಿ ಲಕ್ಷಾಂತರ ವೆಚ್ಚ ಮಾಡಿ ಬಡವರಿಗೆ ಮದುವೆ ಮಾಡುವುದು ಸುಲಭದ ಮಾತಲ್ಲ. ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಮಾಡುವುದು ಉತ್ತಮ. ಇಲ್ಲಿ ಉಳಿತಾಯವಾಗುವ ಹಣವನ್ನು ಸಂಸಾರ ಸಾಗಿಸಲು, ಮುಂದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬಳಸಬಹುದು ಎಂದ ಸಚಿವರು ಬಳಿಕ ವಧು- ವರರಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ವಿನಯ ಗುರೂಜಿ ಮಾತನಾಡಿ, ಹುಬ್ಬಳ್ಳಿ ಸಿದ್ಧಾರೂಢರ, ನಾಡಿಗೆ ಸೈನಿಕರ ಕೊಟ್ಟ ಊರು. ಇಲ್ಲಿ ಒಳ್ಳೆಯ ಕಾರ್ಯಕ್ಕೆ ಸದಾಕಾಲ ಪ್ರಾಶಸ್ತ್ಯ ಸಿಗುತ್ತದೆ. ಇಲ್ಲಿನ ರಾಜಕಾರಿಣಿಗಳು ಎಂದಿಗೂ ಧರ್ಮ ಬಿಟ್ಟು ರಾಜಕಾರಣ ಮಾಡಿಲ್ಲ. ಇಂತಹ ಸ್ಥಳದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಶ್ಲಾಘನೀಯ ಎಂದರು.ಸತಿ-ಪತಿಗಳು ಪರಸ್ಪರ ಅರಿತು ಸುಖ ಜೀವನ ನಡೆಸಬೇಕು. ಗುರು- ಹಿರಿಯರಿಗೆ ಗೌರವ ನೀಡುತ್ತ ತಂದೆ-ತಾಯಿಯರನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಸಹನೆಯಿಂದ ಜೀವನ ಸಾಗಿಸಿ, ನಾಡಿಗೆ ಉತ್ತಮ ಮಕ್ಕಳನ್ನು ನೀಡಿ. ಮುಂದಿನ ವರ್ಷದಿಂದ ಸಾಮೂಹಿಕ ವಿವಾಹಕ್ಕೆ ಮಾಂಗಲ್ಯ ಮತ್ತು ಬಟ್ಟೆ ತಾವೇ ನೀಡುವುದಾಗಿಯೂ ಶ್ರೀಗಳು ತಿಳಿಸಿದರು.
ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ನವ ನವಯುಗ ಸಂಘಟನೆ ಅಧ್ಯಕ್ಷ ಕೃಷ್ಣ ಗಂಡಗಾಳೇಕರ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ, ಜಯತೀರ್ಥ ಕಟ್ಟಿ, ಸುಭಾಸ್ ಸಿಂಗ್ ಜಮಾದಾರ, ಪ್ರಕಾಶ್ ಕ್ಯಾರಕಟ್ಟಿ, ರವಿ ಬಂಕಾಪುರ, ರವಿ ನಾಯ್ಕ, ಶರಣು ಪಾಟೀಲ್, ನಾಗರಾಜ್ ಕಲಾಲ್, ಸಿದ್ದೇಶ್ ಕಬಾಡರ್, ಲೀಲಾವತಿ ಪಾಸ್ತೆ, ಸಂಗೀತಾ ಬದ್ದಿ ಮೊದಲಾದವರು ಉಪಸ್ಥಿತರಿದ್ದರು.