ಮಳೆ, ಬೆಳೆಗಾಗಿ ಮುಸ್ಲಿಮರಿಂದ ಮೊರೆ ಸಾಮೂಹಿಕ ಪ್ರಾರ್ಥನೆ

| Published : Apr 14 2024, 01:55 AM IST

ಸಾರಾಂಶ

ಚಳ್ಳಕೆರೆ ನಗರದ ಕರೇಕಲ್ ಕೆರೆಯಂಗಳದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಕೆಲವು ವರ್ಷಗಳಿಂದ ಮಳೆಯ ಅಭಾವವನ್ನು ಎದುರಿಸುತ್ತಿರುವ ಚಳ್ಳಕೆರೆ ತಾಲ್ಲೂಕಿನ ಈ ಬಾರಿಯಾದರೂ ವಿಶೇಷವಾಗಿ ಉತ್ತಮ ಮಳೆ, ಬೆಳೆಯಾಗಿ ರೈತರ ಬದುಕು ಸಮೃದ್ಧಿಯಾಗಲೆಂದು ಪ್ರಾರ್ಥಿಸಿ ಕರೇಕಲ್ ಕೆರೆಯಂಗಳದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ನಗರದ ಮುಸ್ಲಿಂ ಸಮುದಾಯದ ನೂರಾರು ಬಂಧುಗಳು ಸಲ್ಲಿಸಿದರು.

ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಮುತುವಲ್ಲಿ ಅತಿಕೂರ್‌ ರೆಹಮಾನ್, ಕಳೆದ ಕೆಲವು ವರ್ಷಗಳಿಂದ ಮಳೆ ಇಲ್ಲದೆ ಬೆಳೆಗಳು ನೆಲ ಕಚ್ಚಿದ್ದು, ತಾಲ್ಲೂಕಿನ ಸಾವಿರಾರು ರೈತರು ಬದುಕು ನಡೆಸುವುದೇ ಕಷ್ಟವಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ ಬದುಕುವುದು ಕಷ್ಟವಾಗಿದೆ. ಆದ್ದರಿಂದ ಈ ಬಾರಿ ಮುಸ್ಲಿಂ ಸಮುದಾಯದ ಎಲ್ಲರೂ ಸೇರಿ ತಾಲ್ಲೂಕಿನ ಹಿತದೃಷ್ಠಿಯಿಂದ ಇಲ್ಲಿನ ಕೆರೆಯಂಗಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ನಮಗಂತೂ ಈ ಕಾರ್ಯ ಹೆಚ್ಚು ತೃಪ್ತಿ ತಂದಿದೆ. ಮುಸ್ಲಿಂ ಸಮುದಾಯ ಎಲ್ಲರ ಒಳಿತನ್ನು ಬಯಸುತ್ತದೆ ಎಂದರು.

ಎಸ್.ಎಚ್.ಸೈಯದ್ ಮಾತನಾಡಿ, ನಾವೆಲ್ಲರೂ ರೈತರ ಹಿತದೃಷ್ಠಿಯಿಂದ ಸಾಮೂಹಿಕ ಪ್ರಾರ್ಧನೆ ಸಲ್ಲಿಸೋಣವೆಂದು ನಿರ್ಧರಿಸಿದ್ದೆವು. ಏ.೧೩ರ ಶನಿವಾರ ಬೆಳಗ್ಗೆ ೮ ಗಂಟೆಗೆ ಬಳ್ಳಾರಿ ರಸ್ತೆಯ ಜಾಮೀಯ ಮಸೀದಿಯಿಂದ ನೂರಾರು ಸಂಖ್ಯೆಯಲ್ಲಿ ಸೇರಿ ಅಲ್ಲಿಂದ ಕಾಲ್ನಡಿಗೆ ಮೂಲಕ ಕರೇಕಲ್ ಕೆರೆ ತಲುಪಿ ಅಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಸಮುದಾಯದ ಸಿ.ಆರ್.ಅಲ್ಲಾಬಕ್ಷಿ, ಎಸ್.ಮುಜೀಬುಲ್ಲಾ, ಸೈಯದ್‌ಅನ್ವರ್‌ಮಾಸ್ಟರ್, ಬಿ.ಫರೀದ್‌ಖಾನ್, ಕೆ.ದಾದಾಪೀರ್, ನೂರುದ್ದೀನ್‌ಮೌಲಾನ, ದಾವುದ್‌ಮೌಲಾನ, ಜಾಫರ್, ಖಾದರ್ ಮುಂತಾದವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.