ಸಾರಾಂಶ
ಕನ್ನಡಪ್ರಭ ವಾರ್ತೆ ಸರಸೂರುಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಲಘುವಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟ, ಆದಿ ಕರ್ನಾಟಕ ಮಹಾಸಭಾ ಸೇರಿದಂತೆ ನಾನಾ ಪ್ರಗತಿಪರ ಸಂಘಟನೆಗಳೊಡನೆ ಮಂಗಳವಾರ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಬೃಹತ್ ಪ್ರತಿಭಟನೆ ನಡೆಸಿದವು. ಅಂಬೇಡ್ಕರ್ ಅವರ ಬಗ್ಗೆ ಕಿಂಚಿತ್ತು ಜ್ಞಾನವಿಲ್ಲದ ಅವಿವೇಕಿತನದ ಅಮಿತ್ ಶಾ ಅವರನ್ನು ಗಡಿಪಾರು ಮಾಡಬೇಕು. ಸಂಸತ್ತಿನಿಂದ ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಹೊರಟು ಕೇಂದ್ರ ಸರ್ಕಾರ, ಅಮಿತ್ ಶಾ ವಿರುದ್ಧ ನಾನಾ ಘೋಷಣೆ ಕೂಗುವ ಮೂಲಕ ಇಲ್ಲಿನ ಬಸ್ ನಿಲ್ದಾಣದ ಸಮೀಪ ಮಾನವ ಸರಪಳಿ ನಿರ್ಮಿಸಿಕೊಂಡು ಅಮಿತ್ ಶಾ ಅವರ ಅಣುಕು ಶವ ಮಾಡಿ ಬೊಬ್ಬೆ ಹಾಕಿದರು. ನಂತರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿ, ಅವಿವೇಕಿ ಅಮಿತ ಶಾ ಅವರನ್ನು ಗಡಿಪಾರು ಮಾಡಬೇಕು. ದೇಶದ ಜನರನ್ನು ಈ ಕೂಡಲೇ ಕ್ಷಮೆ ಕೇಳಬೇಕು. ಜತೆಗೆ ರಾಜೀನಾಮೆ ನೀಡಬೇಕು. ದೇಶದ್ರೋಹ ಕಾಯಿದೆಯಡಿ ಬಂಧಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರಕ್ಕೆ ಜನ ತಕ್ಕಪಾಠ ಕಲಿಸಿಕೊಡಲಿದ್ದಾರೆ ಎಂದು ಎಚ್ಚರಿಸಿದರು.ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ಸಂಸತ್ ನಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ದೇಶದ್ರೋಹದ ಕೆಲಸ. ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥೈಹಿಸಿಕೊಳ್ಳದೆ ಇಂಥ ಮಾತನಾಡಿರುವುದು ನಾಚಿಕೆ ಗೇಡಿನ ಸಂಗತಿ. ಇಂಥವರು ದೇಶದ ಗೃಹ ಸಚಿವರಾಗಿರುವುದು ದುರಂತ. ಹೀಗಾಗಿ ಕೂಡಲೇ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಅವರು ಒತ್ತಾಯಿಸಿದರು.ಈ ವೇಳೆ ತಾಲೂಕು ಕಚೇರಿ ತಲುಪಿ ಗ್ರೇಡ್- 2 ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ಪಪಂ ಸದಸ್ಯೆ ಚಂದ್ರಕಲಾ, ಶ್ರೀನಿವಾಸ್, ಚೆಲುವಕೃಷ್ಣ, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಚೆನ್ನಿಪುರ ಮಲ್ಲೇಶ್, ದಸಂಸ ಜಿಲ್ಲಾ ಸಂಚಾಲಕ ಹೆಗ್ಗನೂರು ನಿಂಗರಾಜು, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಮಲ್ಲೇಶ್, ಸರಗೂರು ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಸಣ್ಣಸ್ವಾಮಿ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಹಾಗೂ ಸರಗೂರು ಟೌನ್ ಕಾಂಗ್ರೆಸ್ ಅಧ್ಯಕ್ಷ ಟೋಕನ್ ನಾಗರಾಜು, ವರ್ತಕ ಮಂಡಳಿ ಅಧ್ಯಕ್ಷ ಎಸ್.ಪಿ. ಪ್ರಸಾದ್, ಎಸ್.ಎಂ. ಶ್ರೀನಿವಾಸ್, ಕಸಾಪ ಎಂ. ಕೆಂಡಗಣ್ಣಸ್ವಾಮಿ, ಬೋಗಯ್ಯ, ಇದಿಯಪ್ಪ, ಕಾರಯ್ಯ, ಗೋಪಾಲ್, ಗ್ರಾಮೀಣ ಮಹೇಶ್ ಭಾಗ್ಯಲಕ್ಷ್ಮಿ ನಿಂಗರಾಜು, ಕಂದೇಗಾಲ ಶಿವರಾಜು, ನಾಗರಾಜು ಮೊದಲಾದವರು ಇದ್ದರು.