ಹೇರೂರು: ಸಾಮೂಹಿಕ ಶ್ರೀ ಶನೈಶ್ವರ ಪೂಜೆ, ಧಾರ್ಮಿಕ ಸಭೆ

| Published : May 19 2024, 01:54 AM IST

ಹೇರೂರು: ಸಾಮೂಹಿಕ ಶ್ರೀ ಶನೈಶ್ವರ ಪೂಜೆ, ಧಾರ್ಮಿಕ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ವೇದಮೂರ್ತಿ ನಾಗರಾಜ ಭಟ್ ಕಲ್ಯಾಲು ನೇತೃತ್ವದಲ್ಲಿ ಪೂಜಾನುಷ್ಠಾನಗಳು ಜರುಗಿದವು. ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಮಜೂರು ಗ್ರಾ.ಪಂ. ವ್ಯಾಪ್ತಿಯ ಹೇರೂರು- ಬಂಟಕಲ್ಲು ದೇವಾಡಿಗ ಸೇವಾ ಸಂಘದ ಪಂಚಮ ವರ್ಷದ ಪ್ರಯುಕ್ತ ಶನಿವಾರ ಹೇರೂರು ಶ್ರೀಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ ಸಭಾಂಗಣದಲ್ಲಿ ‘ಸಾಮೂಹಿಕ ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಪನ್ನಗೊಂಡಿತು.

ವೇದಮೂರ್ತಿ ನಾಗರಾಜ ಭಟ್ ಕಲ್ಯಾಲು ನೇತೃತ್ವದಲ್ಲಿ ಪೂಜಾನುಷ್ಠಾನಗಳು ಜರುಗಿದವು. ಸಂಘ ಅಧ್ಯಕ್ಷ ದಿನೇಶ ದೇವಾಡಿಗ ದಂಪತಿ ಪೂಜಾನುಷ್ಠಾನದಲ್ಲಿ ಉಪಸ್ಥಿತರಿದ್ದರು.

ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಘ ಅಧ್ಯಕ್ಷ ದಿನೇಶ ದೇವಾಡಿಗ ವಹಿಸಿದ್ದರು. ನಿವೃತ್ತ ಶಿಕ್ಷಕ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್, ಹೇರೂರು ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಮಜೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ ನಿವೃತ್ತ ಸೈನಿಕ ದಿನಕರ ರಾವ್, ಶಿಲಾಶಿಲ್ಪಿ ವಾಸ್ತುತಜ್ಞ ಕೃಷ್ಣಮೂರ್ತಿ ಆಚಾರ್ಯ, ಅಂಚೆ ಚೀಟಿ ಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಜಯಪ್ರಕಾಶ್ ರಾವ್, ಸಮಾಜಸೇವಕ ಸದಾನಂದ ಪೂಜಾರಿ, ದೇವಸ್ಥಾನದ ಸೇವೆ ಕ್ಷೇತ್ರದ ದೇಜು ಸೇರಿಗಾರ, ರಂಗಕಲಾವಿದ ರಜನೀಶ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಶಶಿಕಲಾ ದಿನೇಶ್ ದೇವಾಡಿಗ ಸ್ವಾಗತಿಸಿದರು. ಯಶೋದಾ ಜಯ ಸೇರಿಗಾರ್, ಶ್ರೀನಿಧಿ ದೇವಾಡಿಗ ನಿರೂಪಿಸಿದರು. ಕಾರ್ಯದರ್ಶಿ ಅಭಿಷೇಕ್ ದೇವಾಡಿಗ ವಂದಿಸಿದರು.