ಸಾಮೂಹಿಕ ವಿವಾಹ ಹಿನ್ನೆಲೆಯಲ್ಲಿ ನಿರೀಕ್ಷಿಸಿದಂತೆ, ಸುತ್ತಮುತ್ತಲಿನ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅದರಲ್ಲೂ ಬಹಳಷ್ಟು ಮಹಿಳೆಯರು ಸಾರಿಗೆ ಬಸ್‌ಗಳ ಮೂಲಕ ಬಂದಿದ್ದರು.
ನವಲಗುಂದ: ಶಾಸಕ ಎನ್.ಎಚ್. ಕೋನರಡ್ಡಿ ದಂಪತಿಗಳ ಪುತ್ರ ನವೀನಕುಮಾರ ಮದುವೆ ಆರತಕ್ಷತೆ ಸೇರಿದಂತೆ 75 ಜೋಡಿಗಳ ಸರ್ವಧರ್ಮ ಸಾಮೂಹಿಕ ಮದುವೆ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣ ಜನರಿಂದ ತುಂಬಿ ಹೋಯಿತು. ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಬಸ್‌ಗಳ ಕಾರ್ಯಾಚರಣೆ ಮಾಡಲಾಯಿತು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರುಗಳು ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ವಿವಿಧ ಧರ್ಮಗಳ ಧಾರ್ಮಿಕ ಗುರುಗಳು, ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಜರುಗಿದ ಸರ್ವಧರ್ಮ ಸಾಮೂಹಿಕ ಮದುವೆಯ ಹಿನ್ನೆಲೆಯಲ್ಲಿ ಭಾನುವಾರ ಇಡೀ ನವಲಗುಂದ ಪಟ್ಟಣಕ್ಕೆ ವಿವಿಧ ಸ್ಥಳಗಳಿಂದ ಜನರು ಬಂದಿದ್ದರು.ನಿರೀಕ್ಷಿಸಿದಂತೆ, ಸುತ್ತಮುತ್ತಲಿನ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅದರಲ್ಲೂ ಬಹಳಷ್ಟು ಮಹಿಳೆಯರು ಸಾರಿಗೆ ಬಸ್‌ಗಳ ಮೂಲಕ ಬಂದಿದ್ದರು. ಹೀಗಾಗಿ ಬಸ್ ನಿಲ್ದಾಣ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು. ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲೂಕುಗಳು ಸೇರಿದಂತೆ ಅಕ್ಕಪಕ್ಕದ ತಾಲೂಕುಗಳಾದ ಗದಗ, ರೋಣ, ಸವದತ್ತಿ, ಧಾರವಾಡ ಹಾಗೂ ದೂರದ ಬಾಗಲಕೋಟೆ ಜಿಲ್ಲೆಯ ವಿವಿಧ ಸ್ಥಳಗಳಿಂದಲೂ ಸಾರ್ವಜನಿಕರು ಬಂದಿರುವುದು ಕಂಡುಬಂದಿತು.
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಉಪಸ್ಥಿತಿಯಲ್ಲಿ ವಿಭಾಗೀಯ ಸಂಚಾರ ಅಧಿಕಾರಿ ವೈ.ಎಂ. ಶಿವರೆಡ್ಡಿ, ವಿಭಾಗೀಯ ತಾಂತ್ರಿಕ ಎಂಜನೀಯರ್ ದೀಪಕ ಜಾಧವ, ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಮಂಜುನಾಥ ಕಟ್ಟಿಮನಿ, ನವಲಗುಂದ ಡಿಪೋ ಮ್ಯಾನೇಜರ ಎಸ್.ಎಂ. ವಾಲಿ ನೇತೃತ್ವದಲ್ಲಿ ನವಲಗುಂದ ಘಟಕದ ಮೇಲ್ವಿಚಾರಕರು, ಸಾರಿಗೆ ನಿಯಂತ್ರಕರು, ಭದ್ರತಾ ಹಾಗೂ ಆಡಳಿತ ಸಿಬ್ಬಂದಿಗಳು ಬೆಳಗ್ಗೆಯಿಂದ ತಡರಾತ್ರಿಯ ವರೆಗೆ ಬಸ್ ನಿಲ್ದಾಣದಲ್ಲಿ ಹಾಜರಿದ್ದು, ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಬಸ್ಸುಗಳ ಹೊಂದಾಣಿಕೆ ಮಾಡಿ ಸುಗಮ ಸಂಚಾರದ ಮೇಲ್ವಿಚಾರಣೆ ಮಾಡುತ್ತಿರುವುದು ಕಂಡುಬಂದಿತು.