ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಬೈರತಿ ಸುರೇಶ

| Published : May 04 2024, 12:31 AM IST

ಸಾರಾಂಶ

ಬಿಜೆಪಿಯವರು ಕಾಂಗ್ರೆಸ್ ಏನು ಅಭಿವೃದ್ಧಿ ಮಾಡಿದೆ ಎನ್ನುತ್ತಾರಲ್ಲ, ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶವನ್ನು ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ಆದರೆ ಈ ಬಿಜೆಪಿಯವರ ಪ್ರಕಾರ 2014ರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ರೀತಿ ಆಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.

ಕುಕನೂರು: ಬಿಜೆಪಿಯಿಂದ ಜಾತಿ, ಜನಾಂಗದ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಆರೋಪಿಸಿದರು.

ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಇದು ಕಾಂಗ್ರೆಸ್‌ ನ್ಯಾಯ, ಬಿಜೆಪಿಯ ಅನ್ಯಾಯದ ನಡುವೆ ನಡೆಯುವ ಚುನಾವಣೆ ಆಗಿದೆ ಎಂದರು.

ಬಿಜೆಪಿಯವರು ಕಾಂಗ್ರೆಸ್ ಏನು ಅಭಿವೃದ್ಧಿ ಮಾಡಿದೆ ಎನ್ನುತ್ತಾರಲ್ಲ, ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶವನ್ನು ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ಆದರೆ ಈ ಬಿಜೆಪಿಯವರ ಪ್ರಕಾರ 2014ರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ರೀತಿ ಆಗಿದೆ ಎಂದು ಲೇವಡಿ ಮಾಡಿದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಚೈನಿ ಮಾಡುವುದಕ್ಕೆ ವಿದೇಶಕ್ಕೆ ಹೋಗುತ್ತಾರೆಯೇ ಹೊರತು ವಿದೇಶಗಳಿಂದ ಭಾರತಕ್ಕೆ ಹೂಡಿಕೆ ಶೂನ್ಯವಾಗಿದೆ. ಮೋದಿ ಅವರದ್ದು ದ್ವೇಷ, ಅಸೂಯೆ, ಟೀಕೆ, ಜಾತಿ, ಧರ್ಮದ ಹೆಸರಿನಲ್ಲಿ ಭಾಷಣ ಇರುತ್ತದೆ. ಆದರೆ ಕಾಂಗ್ರೆಸ್ ಅಭಿವೃದ್ಧಿಯ ಪೂರ್ಣ ಚಿತ್ರಣ ನೀಡುತ್ತದೆ ಎಂದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ನಾವು ಶ್ರೀರಾಮನ ಆರಾಧನೆ ಮಾಡುತ್ತೇವೆ. ಭಕ್ತಿ ಹೃದಯಲ್ಲಿರಬೇಕು. ಅಭಿವೃದ್ಧಿ ಜನರ ಮಧ್ಯೆ ಇರಬೇಕು. ಅಭಿವೃದ್ಧಿ ಮರೆತು ದೇವರ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಸಲ್ಲದು. ಇದು ಸತ್ಯ, ಸುಳ್ಳುಗಳ ಚುನಾವಣೆ. ಕಾಂಗ್ರೆಸ್‌ನ ಸತ್ಯಕ್ಕೆ ಗೆಲುವು ಸಿಗುತ್ತದೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಬಿಜೆಪಿ ಷಡ್ಯಂತ್ರ್ಯಕ್ಕೆ ನಾನು ಬಿಜೆಪಿ ತೊರೆದೆ. ಜನಾರ್ದನ ರೆಡ್ಡಿ ಸಂಗಣ್ಣನಂಥವರು ನೂರಾರು ಜನ ಇದ್ದಾರೆ ಎಂದಿದ್ದಾರೆ. ಆದರೆ ಜನಾರ್ದನ ರೆಡ್ಡಿ ಅವರೇ, ತಾವು ಬಿಜೆಪಿ ಎಂಬ ವಾಷಿಂಗ್ ಮಿಷನ್‌ಗೆ ಬಿದ್ದ ಮೇಲೆ ಕ್ಲೀನ್ ಆಗಿದ್ದೀರಿ ಎಂದರು.

ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಹನುಮಂತಗೌಡ ಚಂಡೂರು, ಮಾಲತಿ ನಾಯಕ, ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ಚಂದ್ರಶೇಖರಯ್ಯ ಹಿರೇಮಠ, ಮಂಜುನಾಥ ಕಡೆಮನಿ, ಶಿವು ಆದಾಪುರ, ವೀರನಗೌಡ ಬಳೂಟಗಿ, ಮಂಜುಳಾ ಕರಡಿ, ಗ್ರಾಪಂ ಅಧ್ಯಕ್ಷೆ ರಜೀಯಾಬೇಗಂ, ತಿಮ್ಮಣ್ಣ ಚೌಡ್ಕಿ ಇತರರಿದ್ದರು.